

ಮಾನ್ವಿ: ಸರ್ಕಾರದ ಕೃಷಿ ಪರಿಕರಗಳ ಸಹಾಯಧನ ಸೇರಿ ಇತರ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಗುರುನಾಥ ಎಂ.ಭೂಸನೂರೆ ಹೇಳಿದರು.
ತಾಲೂಕಿನ ಕರೆಗುಡ್ಡ ಗ್ರಾಮದ ಮಹಾಂತೇಶ್ವರ ಮಠದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರನ್ನು ಕೃಷಿಗೆ ಉತ್ತೇಜಿಸುವ ಉದ್ದೇಶದಿಂದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನವನ್ನು ರೈತ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಆ್ಯಪ್ ಮೂಲಕ ಮುಂಗಾರು ಹಂಗಾಮಿನ ಬೆಳೆಗಳನ್ನು ಸಮೀಕ್ಷೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳೆ ಸಮೀಕ್ಷೆ ನಡೆಸಿ ಪಹಣಿಗಳಲ್ಲಿ ಬೆಳೆ ನಮೂದಿಸಬೇಕು. ಇದರಿಂದ ಖರೀದಿ ಕೇಂದ್ರದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ 3 ಕಂತುಗಳಲ್ಲಿ ಪ್ರತಿ ಕಂತಿಗೆ 2 ಸಾವಿರ ರೂ. ಡಿಪಿಟಿ ಮೂಲಕ ರೈತರ ಖಾತೆಗೆ ಜಮಾ ಮಾಡುವುದಕ್ಕೆ ಕೃಷಿ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಹಾಂತೇಶ್ವರಮಠದ ಮಹಾಂತಲಿಂಗ ಸ್ವಾಮಿಗಳು, ಹಿರೇಕೋಟ್ನೆಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಕುಮಾರ, ಎ.ಟಿ.ಎಂ. ಹರೀಶ್, ಪ್ರಗತಿಪರ ರೈತರಾದ ಶಿವರಾಜ, ಬಸವರಾಜ, ಸಂಗಪ್ಪ ಇತರರಿದ್ದರು.