

ಮಾನ್ವಿ: ಐವತ್ತನೇ ವರ್ಷದ ಶ್ರೀದೇವಿ ಪುರಾಣ ಮತ್ತು ದಸರಾ ಮಹೋತ್ಸವದ ಸುವರ್ಣ ಮಹೋತ್ಸವಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಲ್ಮಠದ ಲಿಂ. ಹಿರಿಯ ಶಿವಮೂರ್ತಿ ಶಿವಾಚಾರ್ಯರು ಪ್ರಾಥಮಿಕ ಶಿಕ್ಷಣದಿಂದ ವೈದ್ಯಕೀಯ ಶಿಕ್ಷಣದವರೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಆರಂಭಿಸಿದ ದಸರಾ ಮಹೋತ್ಸವ 49 ವರ್ಷ ಪೂರೈಸಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ.
ಈ ಬಾರಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈಗಿನ ಶ್ರೀಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ತಾಲೂಕಿನ ಭಕ್ತರು ಸರ್ವ ರೀತಿಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳ್ಳಿಸುವಂತೆ ಕೋರಿದರು.
ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಹಿರಿಯ ಶ್ರೀಗಳು ಲೋಕಕಲ್ಯಾಣಕ್ಕಾಗಿ ಪ್ರಾರಂಭಿಸಿದ ದಸರಾ ಮಹೋತ್ಸವ ಹಾಗೂ ಶ್ರೀದೇವಿ ಪುರಾಣ ಕಾರ್ಯಕ್ರಮ ಸೆ. 22 ರಿಂದ ಅ. 4 ರವರೆಗೆ 14 ದಿನಗಳ ಕಾಲ ಆಚರಿಸಲಾಗುವುದು.
50 ನೇ ವರ್ಷದ ಅಂಗವಾಗಿ 50 ಕೆಜಿ ಬೆಳ್ಳಿಯ ಅಂಬಾರಿಯಲ್ಲಿ ಪಂಚಲೋಹದ ಶ್ರೀದೇವಿಯ ಉತ್ಸವ ಮೂರ್ತಿ ಕೂಡಿಸಿ ನಗರದಲ್ಲಿ ಮೆರವಣಿಗೆ ಮಾಡಲಾಗುವುದು.
ಒಂಬತ್ತು ದಿನಗಳ ಕಾಲ ನವ ಕುಂಡಗಳಲ್ಲಿ ಸಾಮೂಹಿಕವಾಗಿ ಚಂಡಿಕಾ ಹೋಮ, ನಂತರದ ಶ್ರೀಶೈಲ ಪೀಠದ ಜಗದ್ಗುರುಗಳಿಂದ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ಸಿದ್ಧಾಂತ ಶಿಖಾಮಣಿ ಗ್ರಂಥದ ಪ್ರವಚನ ನಡೆಯಲಿದೆ.
ಇನ್ನು ಪಂಚ ಪೀಠಗಳ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ಉದ್ದೇಶವಿದ್ದು, ಈ ಕುರಿತು ಜಗದ್ಗರುಗಳನ್ನು ಸಂಪರ್ಕಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರು, ಗಣ್ಯರಿಗೆ ಸನ್ಮಾನ, ಲಿಂಗದೀಕ್ಷೆ, ಸರ್ವಧರ್ಮ ಸಮಾವೇಶ ಸೇರಿ ಧಾರ್ಮಿಕ, ಜನಪದ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.