

ಮಾನ್ವಿ: ತಾಲೂಕಿನಲ್ಲಿ ಹಾಲು ಶೇಖರಣೆ ಹಾಗೂ ಸಗಟು ಹಾಲು ಮಾರಾಟದಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಹಾಲಿನ ಡೈರಿಗಳಲ್ಲಿನ ಹಾಲಿನ ಮಾದರಿಗಳನ್ನು ಪಡೆಯಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿ ಬನದೇಶ್ವರ ಹೇಳಿದರು.
ತಾಲುಕಿನ ಅಡವಿ ಅಮರೇಶ್ವರ ಹಾಲು ಉತ್ಪಾದಕರ ಸಂಘದ ಹಾಲಿನ ಡೈರಿಯಲ್ಲಿ ಬುಧವಾರ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಮಾತನಾಡಿದರು. ಆಹಾರ ಸುರಕ್ಷತೆ ಇಲಾಖೆಯ ಆಯುಕ್ತರ ಸೂಚನೆಯಂತೆ ಆ.1 ರಿಂದ ತಾಲೂಕಿನಾದ್ಯಂತ ಆಂದೋಲನಾದ ಮಾದರಿಯಲ್ಲಿ ತಾಲೂಕಿನಲ್ಲಿರುವ ಕೆಎಂಎಫ್ ಹಾಲು ಸಂಗ್ರಹ ಕೇಂದ್ರಗಳಲ್ಲಿ ಹಾಗೂ ಖಾಸಗಿ ಹಾಲಿನ ಡೇರಿಗಳಲ್ಲಿ ಹಾಲಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಅಮರೇಶ್ವರ ಕ್ಯಾಂಪ್ ಹಾಲು ಉತ್ಪಾದಕರ ಸಂಘ, ಜಾಲಪುರ ಗ್ರಾಮದ ಹಾಲು ಉತ್ಪಾದಕರ ಸಂಘ, ಮಾನ್ವಿ ಪಟ್ಟಣದ ದೀಪಕ್ ಮಿಲ್ಕ್ ಡೈರಿ, ಆಂಜನೇಯ ಮಿಲ್ಕ ಡೈರಿ, ಸೇರಿ ಒಟ್ಟು 9 ಮಾದರಿಗಳನ್ನು ಸಂಗ್ರಹಿಸಿ ಕೆ.ಎಂ.ಎಫ್. ಪ್ರಯೋಗಾಲಯ ಹಾಗೂ ಮೈಸೂರಿನ ಆಹಾರ ಸುರಕ್ಷತಾ ಇಲಾಖೆಯ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು ಎಂದರು.
ಹಾಲಿನಲ್ಲಿ ನೀರು, ಯೂರಿಯಾ, ಡಿಟರ್ಜೆಂಟ್ ಕಲಬೆರಕೆ ಮಾಡುತ್ತಿರುವುದು ಪತ್ತೆಯಾಗಿದೆ. ಇಂತಹ ಕಲಬೆರಕೆ ಹಾಲನ್ನು ಮಕ್ಕಳು ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಹಾಲಿನ ಗುಣಮಟ್ಟ ಪರೀಕ್ಷೆಗಾಗಿ ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯಾದ್ಯಂತ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅದರ ಭಾಗವಾಗಿ ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿನ ಹಾಲಿನ ಡೈರಿಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ವರದಿಯ ಅಧಾರದ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.