ಗ್ರಾಮದೊಳಗೆ ಹರಿದ ನೀರು; ಉಕ್ಕಿ ಹರಿಯುತ್ತಿದೆ ತುಂಗಭದ್ರಾ ನದಿಯ ರಭಸಕ್ಕೆ ಜನಜೀವನ ಅಸ್ತವ್ಯಸ್ತ

06092022 Manvi Rain
Published on

ಮಾನ್ವಿ: ತುಂಗಭದ್ರಾ ನದಿ ನೀರು ಚೀಕಲಪರ್ವಿ, ಕಾತರ್ಕಿ ಗ್ರಾಮಗಳ ಹತ್ತಿರ ತಲುಪಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಹಿರೇಹಳ್ಳ, ಪೋತ್ನಾಳ, ನಂದಿಹಾಳ, ಮುಷ್ಟೂರು, ನಕ್ಕುಂದಿ ಹಾಗೂ ಇತರ ವಿವಿಧ ಗ್ರಾಮಗಳ ಹಳ್ಳಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಳ್ಳದ ನೀರು ಕೂಡ ಸೇರುತ್ತಿರುವುದರಿಂದ ಚೀಕಲಪರ್ವಿಯ ಐತಿಹಾಸಿಕ ವಿಜಯದಾಸರ ಕಟ್ಟೆ ಸಂಪೂರ್ಣ ಮುಳಗಿದ್ದು, ರುದ್ರಮುನೀಶ್ವರ ಮಠದವರೆಗೆ ನೀರು ಬಂದಿದೆ. ಗ್ರಾಮದ ಪ್ರಮುಖ ರಸ್ತೆಯ ಮೇಲೆಯೂ ನೀರು ಹರಿಯುತ್ತಿದ್ದು, ನದಿಗೆ ಇನ್ನೂ ಹೆಚ್ಚಿನ ಪ್ರಮಾನದಲ್ಲಿ ನೀರು ಹರಿಸಿದರೆ ಮತ್ತಷ್ಟು ತೊಂದರೆಯಾಗಲಿದೆ.

ಚೀಕಲಪರ್ವಿ ಹಳ್ಳ ತುಂಬು ಹರಿಯುತ್ತಿದ್ದು, ಗ್ರಾಮಕ್ಕೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಹಾಗಿದೆ. ರಂಗದಾಳ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಮಾನ್ವಿ-ಚೀಕಲಪರ್ವಿ, ಮೂಷ್ಟೂರು-ಮಾನ್ವಿ ಸಂಪರ್ಕ ಕಡಿತಗೊಂಡಿದೆ.

ಹಳ್ಳದ ಮತ್ತು ನದಿ ಪಾತ್ರದಲ್ಲಿನ ಹೊಲಗಳಿಗೆ ಅಪಾರ ನೀರು ಹರಿದು ಬಂದ ಪರಿಣಾಮ ಹತ್ತಿ, ಭತ್ತ ಹಾಗೂ ಇತರ ಬೆಳೆಗಳು ಹಾನಿಯಾಗಿವೆ. ಹಳ್ಳ ಮತ್ತು ನದಿ ದಂಡೆಯಲ್ಲಿನ ವಿದ್ಯುತ್ ಪಂಪ್‌ಸೆಟ್‌ಗಳು ಮುಳುಗಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕಾತರ್ಕಿ, ಹರನಹಳ್ಳಿ ಹಾಗೂ ಇತರ ಗ್ರಾಮಗಳಲ್ಲಿ ತುಂಗಭದ್ರಾ ನದಿ ನೀರು ಗ್ರಾಮಗಳ ಹತ್ತಿರ ಬಂದಿದೆ.

ಅತಿ ಹೆಚ್ಚು ಮಳೆ: ತಾಲೂಕಿನಲ್ಲಿ ಹಿರೇಕೊಟ್ನೆಕಲ್ ಗ್ರಾಮದ ಸುತ್ತಮುತ್ತ ಅತಿ ಹೆಚ್ಚು ಮಳೆಯಾಗಿದೆ. ಸಮೀಪದ ಅಡವಿ ಅಮರೇಶ್ವರ ದೇವಸ್ಥಾನ ಸುತ್ತಮುತ್ತ ಮಳೆ ನೀರು ನಿಂತು ಭಕ್ತರು ದರ್ಶನಕ್ಕೆ ಹೋಗಲು ತೊಂದರೆಯಾಗಿದೆ. ಮಾನ್ವಿ 56 ಮಿ.ಮೀ. ಹಾಗೂ ಹಿರೇಕೊಟ್ನೆಕಲ್‌ನಲ್ಲಿ 65 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ನೀರಿನಿಂದ ಆವೃತವಾಗಿದ್ದು, ಫಸಲು ಕೊಳೆಯುವ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net