

ಮಾನ್ವಿ: ರಾಯಚೂರು ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲು ರಾಜ್ಯ ಸರ್ಕಾರ 52 ಕೋಟಿ ರೂ. ಮೀಸಲಿಟ್ಟಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಪಟ್ಟಣದಲ್ಲಿ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಪರೀಕ್ಷೆಗೆ ದೊಡ್ಡ ನಗರ ಪ್ರದೇಶಗಳಿಗೆ ಹೋಗಬೇಕಿತ್ತು. ಈಗ ಜಿಲ್ಲೆಯಲ್ಲಿ ಆರಂಭವಾಗುತ್ತಿರುವುದರಿಂದ ಬಡವರಿಗೆ ಸಹಾಯವಾಗಲಿದೆ. ಹೃದಯ ಕಾಯಿಲೆ ಇರುವವರು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿತ್ತು. ಆದರೆ ಸರ್ಕಾರ ಈಗ ನಗರದ ಒಪೆಕ್ ಆಸ್ಪತ್ರೆಯಲ್ಲಿ 15 ಸಾವಿರ ರೂ. ವೆಚ್ಚದಲ್ಲಿ ಸ್ಟಂಟ್ ಅಳವಡಿಕೆ ಮಾಡಲಾಗುತ್ತಿದೆ. ಪೋತ್ನಾಳ ಮತ್ತು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು.