

ಮಾನ್ವಿ: ಬೃಹತ್ ಆರೋಗ್ಯ ಮೇಳದಲ್ಲಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಹೆಚ್ಚಿನ ಜನ ಬಂದಿದ್ದರು.
ಪಟ್ಟಣ ಹಾಗೂ ತಾಲೂಕಿನ ನೀರಮಾನ್ವಿ, ನಂದಿಹಾಳ, ಸಂಗಾಪುರ, ಹರವಿ, ನಸಲಾಪುರ, ಯರಮಲದೊಡ್ಡಿ, ಗುಡದಿನ್ನಿ, ಕಡದಿನ್ನಿ, ಬಳ್ಳಟಗಿ, ಅಲ್ದಾಳ, ಭೋಗಾವತಿ, ಕಪಗಲ್, ಪೋತ್ನಾಳ, ಕೋಟ್ನೆಕಲ್, ಅಮರೇಶ್ವರ ಕ್ಯಾಂಪ್ ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಜನರು ಬೆಳಗ್ಗೆಯಿಂದಲೇ ಆರೋಗ್ಯ ಮೇಳದತ್ತ ಧಾವಿಸಿದರು.
ಕಾಲೇಜಿನ ಪ್ರವೇಶದ್ವಾರ ಬಳಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಆರು ಸಾವಿರ ಜನರು ನೋಂದಾಯಿಸಿದ್ದರು. ಚೀಟಿ ಪಡೆದವರು ಬಿಪಿ, ಶುಗರ್ ತಪಾಸಣೆ ನಂತರ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಬ್ಲಾಕ್‌ವಾರು ಮಳಿಗೆಗಳು
ಎ ಬ್ಲಾಕ್‌ನಲ್ಲಿ ನೋಂದಣಿಗೆ, ಬಿ ಬ್ಲಾಕ್‌ನಲ್ಲಿ ತಪಾಸಣೆಗೆ ಏರ್ಪಾಡು ಮಾಡಲಾಗಿತ್ತು. ಸಿ ಬ್ಲಾಕ್‌ನಲ್ಲಿ ವೈದ್ಯಕೀಯ, ಹೃದ್ರೋಗ ತಪಾಸಣಾ, ನರರೋಗ, ಮೂತ್ರ ಪಿಂಡ, ಅಂಕೋಲಾಜಿ, ಮಾನಸಿಕ ರೋಗ ತಜ್ಞ ವಿಭಾಗ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ವಿಭಾಗ, ಮಕ್ಕಳ ತಜ್ಞ ವಿಭಾಗ ಮತ್ತು ಚರ್ಮ ರೋಗ ತಜ್ಞ ವಿಭಾಗದಡಿ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಸಚಿವರಾದ ದಿನೇಶ್ ಗುಂಡೂರಾವ್, ಎನ್.ಎಸ್. ಬೋಸರಾಜು, ಸಂಸದ ಕುಮಾರ ನಾಯಕ, ಶಾಸಕ ಹಂಪಯ್ಯ ನಾಯಕ ವಿವಿಧ ವಿಭಾಗಗಳ 30 ಕೌಂಟರ್‌ಗಳನ್ನು ವೀಕ್ಷಿಸಿದರು. ಊಟ, ಕುಡಿವ ನೀರು ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ 50 ಅಂಗನವಾಡಿ ಕಾರ್ಯಕರ್ತೆಯರಿಂದ ಆರೋಗ್ಯ ಜಾಗೃತಿ ಮಳಿಗೆ ಹಾಕಲಾಗಿತ್ತು.