ಗುರುಸಾರ್ವಭೌಮರ ಆರಾಧನೆ 10ರಿಂದ

Published on

ಮಾನ್ವಿ: ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದ ಗುರುರಾಯರ ಮಠದಲ್ಲಿ ಆ.5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹೈದರಾಬಾದ್‌ನ ಪಂಡಿತ ಪ್ರಾಣೇಶಾಚಾರ್ಯ ಚಿಕ್ಕದಿನ್ನಿ ಅವರಿಂದ ಆ.5 ರಿಂದ 10ರವರೆಗೆ ಸಂಜೆ 6-30 ಕ್ಕೆ ‘ದಾಸರು ಕಂಡ ಗುರು ರಾಘವೇಂದ್ರರ ಚರಿತ್ರೆ’ ಹಾಗೂ ಹೊಸಪೇಟೆಯ ಪಂಡಿತ ಯು.ಆರ್.ಶ್ರೀನಿವಾಸಾಚಾರ್ಯ ಅವರಿಂದ ಆ.10 ರಿಂದ 12 ರವರೆಗೆ ಬೆಳಗ್ಗೆ 10 ಕ್ಕೆ ರಾಘವೇಂದ್ರ ಸ್ವಾಮಿಗಳ ಚರಿತ್ರೆ ಕುರಿತು ಪ್ರವಚನ ನಡೆಯಲಿದೆ.

ಆ.8 ರಂದು ಸಂಜೆ 6.30ಕ್ಕೆ ಪಂ. ಹನುಮೇಶ ಅಚಾರ್ಯ ನೇತೃತ್ವದಲ್ಲಿ ಅಷ್ಟಾಕ್ಷರ ಮಂತ್ರ ಹೋಮ ಹಾಗೂ ಪೂರ್ಣಾಹುತಿ, ಆ.9ರ ಬೆಳಗ್ಗೆ 7.30ಕ್ಕೆ ಋಗ್ವೇದ, ಯಜುರ್ವೇದ ನಿತ್ಯ ನೂತನೂಪಾಕರ್ಮ, ಸತ್ಯನಾರಾಯಣ ಸ್ವಾಮಿ ಸಾಮೂಹಿಕ ಪೂಜೆ, ಸಂಜೆ 5.30ಕ್ಕೆ ಗೋಪೂಜೆ, ಧಾನ್ಯ ಪೂಜೆ ನಡೆಯಲಿದೆ.

ಆ.10 ರಂದು ಸಾಮೂಹಿಕ ಉಪನಯನ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಕ್ಕೆ ಬೆಳಗ್ಗೆ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ, ಅರ್ಚನೆ, ಅಲಂಕಾರ ಹಸ್ತೋದಕ, ಮಹಾ ಮಂಗಳಾರತಿ, ಸಂಜೆ ವಿವಿಧ ಭಜನಾ ಮಂಡಳಿಯವರಿಂದ ಭಜನೆ, ಸ್ವಸ್ತಿವಾಚನ, ಮಹಾ ಮಂಗಳಾರತಿ, ಶ್ರೇಯ ಪ್ರಾರ್ಥನೆ ನೆರವೇರಲಿದೆ.

ಆ.10 ರಂದು ಪೂರ್ವಾರಾಧನೆ, 11 ರಂದು ಮಧ್ಯಾರಾಧನೆ, 12 ರಂದು ಉತ್ತರಾರಾಧನೆ ಅಂಗವಾಗಿ ವಿವಿಧ ಭಜನಾ ಮಂಡಳಿಯವರೊಂದಿಗೆ ಪಟ್ಟಣದ ರಾಜಬೀದಿಗಳಲ್ಲಿ ಮಹಾ ರಥೋತ್ಸವ ಕಾರ್ಯಕ್ರಮವನ್ನು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರ ಅಜ್ಞಾನುಸಾರ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಗೌರವ ವಿಚಾರಣಾಕರ್ತ ಮುದ್ದುರಂಗರಾವ್ ಮುತಾಲಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net