

ಮಾನ್ವಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಪಾಲಕರು ಮಕ್ಕಳನ್ನು ದಾಖಲಿಸುವಂತೆ ಬಿಇಒ ಚಂದ್ರಶೇಖರ ದೊಡ್ಡಮನಿ ಮನವಿ ಮಾಡಿದರು.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಧ್ಯಾಹ್ನ ಬಿಸಿಯೂಟ ಯೋಜನೆ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರಿ ಶಾಲೆಗಳು ಶ್ರಮಿಸುತ್ತಿದ್ದು, ಕಲಿಕಾಸ್ನೇಹಿ ವಾತಾವರಣದ ಜತೆಗೆ ಸದೃಢ ಬೆಳವಣಿಗೆಗೆ ಅಗತ್ಯ ಪೌಷ್ಟಿಕ ಆಹಾರ, ರಕ್ತಹೀನತೆಗೆ ಪರಿಹಾರ, ನಿರಂತರ ಕಲಿಕೆ ಆಧಾರವಾಗಿದೆ ಎಂದರು.
ಖಾಸಗಿ ಶಾಲೆಗಳನ್ನು ಮೀರಿಸುವಂತೆ ಎಲ್ಲ ಸೌಕರ್ಯಗಳಿವೆ. ಶೌಚಗೃಹ, ಆಟದ ಮೈದಾನ, ಅಡುಗೆ ಕೋಣೆ, ಆಟದ ಸಾಮಗ್ರಿ, ಕಂಪ್ಯೂಟರ್ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, 10 ನೇ ತರಗತಿ ಮಕ್ಕಳಿಗೆ ವಿಶೇಷ ತರಗತಿ ಬಿಸಿಯೂಟ, ಉಚಿತ ಸಮವಸ್ತ್ರ, ಶೂ, ಸಾಕ್ಸ್, ಪಠ್ಯಪುಸ್ತಕ, ಹಾಲು, ಮೊಟ್ಟೆ, ರಾಗಿ ಮಾಲ್ಟ್, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಎಸಿಎಫ್ ವ್ಯವಸ್ಥಾಪಕ ಮಹಾದೇವ, ಇಸಿಒ ಎಂ.ಡಿ.ಯೂನುಸ್, ಅಕ್ಷರ ದಾಸೋಹದ ತಾಲೂಕು ನಿರ್ದೇಶಕ ಕುಬೇರ, ಸಿಆರ್‌ಪಿ ನಾಗಪ್ಪ ಮಾತನಾಡಿದರು. ಪುರಸಭೆ ಸದಸ್ಯ ಶಿವರಾಜ ನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ ಕುರ್ಡಿ, ನಿವೃತ್ತ ಬಿಇಒ ರಾಮಣ್ಣ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕುಮಾರ, ಉಪಪ್ರಾಚಾರ್ಯ ಕರಿಬಸಯ್ಯಸ್ವಾಮಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಸಂಗಮೇಶ ಮುಧೋಳ, ಸಿಆರ್‌ಪಿ ಶ್ರೀಧರ ದೇಸಾಯಿ, ವೆಂಕಟೇಶ, ಸಿಎಂ.ನರಸಿಂಹ ಇತರರಿದ್ದರು.