ರಬ್ಬಣಕಲ್ ಕೆರೆಯಲ್ಲಿ ಖಾಲಿಯಾಗುತ್ತಿದೆ ಜೀವಜಲ

Manvi water storege
ಮಾನ್ವಿ ಸಮೀಪದ ರಬ್ಬಣಕಲ್ ಶಾಶ್ವತ ಕುಡಿವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ.
Published on

ಶರಣಬಸವ ನೀರಮಾನ್ವಿ

ಮಾನ್ವಿ : ಪಟ್ಟಣದ ಜನರಿಗೆ ಕುಡಿವ ನೀರಿನ ಕೊರತೆಯಾಗದಂತೆ ಶಾಶ್ವತ ಕುಡಿವ ನೀರಿನ ಕೆರೆ ನಿರ್ಮಾಣವಾದರೂ, ಬೇಸಿಗೆಯಲ್ಲಿ ಐದಾರು ದಿನಗಳಿಗೊಮ್ಮೆ ನೀರು ಬಿಡುವುದು ಮಾತ್ರ ತಪ್ಪುತ್ತಿಲ್ಲ ಎಂದು ಸ್ಥಳೀಯರು ಶಪಿಸಲಾರಂಭಿಸಿದ್ದಾರೆ.

ರಬ್ಬಣಕಲ್ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 88 ಕೋಟಿ ರೂ. ವೆಚ್ಚದಲ್ಲಿ 60 ಎಕರೆ, 9.5 ಮೀ. ಎತ್ತರ, 1,218 ಮಿ.ಲೀ. ನೀರು ಸಂಗ್ರಹ ಸಾಮರ್ಥ್ಯದ ಕುಡಿವ ನೀರಿನ ಕೆರೆ ನಿರ್ಮಿಸಲಾಗಿದ್ದು, 2019ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಆದರೆ, ಪಟ್ಟಣದಲ್ಲಿರುವ 9,865 ಮನೆಗಳ ಪೈಕಿ 3,275 ಗೃಹ ಹಾಗೂ 63 ವಾಣಿಜ್ಯ ನಳದ ಸಂಪರ್ಕಗಳಿವೆ. 2011 ರ ಜನಗಣತಿ ಪ್ರಕಾರ ಪಟ್ಟಣದಲ್ಲಿ 46,465 ಜನಸಂಖ್ಯೆ ಇತ್ತು. ಈಗ ಸುಮಾರು 70 ಸಾವಿರಕ್ಕೆ ಹೆಚ್ಚಿದೆ. ಜನಸಂಖ್ಯೆ ಹೆಚ್ಚಳವೇ ಕುಡಿವ ನೀರಿನ ಅಭಾವಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ನೀಗಿಸಲು ಸ್ಥಳೀಯ ಪುರಸಭೆ ಪ್ರತಿವರ್ಷ ಹೆಣಗಾಡುತ್ತಿದ್ದು, ಪಟ್ಟಣದ ಸೋನಿಯಾಗಾಂಧಿ ನಗರ, ಸಿಮೆಂಟ್ ರೋಡ್, ಜಯನಗರ ಇತರ ವಾರ್ಡ್‌ಗಳಲ್ಲಿ ಜೀವಜಲದ ಸಮಸ್ಯೆ ತಲೆದೋರಿದೆ.

ಮಾಸಾಂತ್ಯದವರೆಗೆ ಇರಲಿದೆ

ಕೆರೆಯಲ್ಲಿ ಈಗ 5.8 ಮೀ. ನೀರು ಬಾಕಿ ಇದ್ದು, ಇದೇ ಮಾಸಾಂತ್ಯದವರೆಗೆ ಸರಿ ಹೋಗುತ್ತವೆ. ಹೀಗಾಗಿ ಕಾಲುವೆಯಿಂದ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸುವ ಕಾರ್ಯ ಪುರಸಭೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ನೀರಿನ ಅಭಾವ ತೀವ್ರವಾಗಿ ಎದುರಿಸಬೇಕಾದ ಅನಿವಾರ್ಯ ಇದೆ.

ಕೊಳವೆಬಾವಿ ಕೊರೆಸಲಿ: ಮುಖ್ಯ ನಾಲೆಗೆ ನೀರು ಬಿಟ್ಟಾಗ 85ನೇ ವಿತರಣಾ ಕಾಲುವೆ ಮೇಲ್ಭಾಗದಲ್ಲಿ ರೈತರು ನೀರು ಬಿಡದ ಕಾರಣ ಅಗತ್ಯ ಪ್ರಮಾಣದ ನೀರು ತುಂಬಿಸಲು ಆಗಲಿಲ್ಲ ಎಂಬ ಹಾರಿಕೆ ಉತ್ತರ ಪುರಸಭೆ ನೀಡುತ್ತಿದೆ. ಆದರೆ, ಪಟ್ಟಣಕ್ಕೆ ಐದಾರು ದಿನಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ರಬ್ಬಣಕಲ್ ಕೆರೆ ಅಲ್ಲದೇ, ಕಾತರಕಿ ಬಳಿ ತುಂಗಭದ್ರಾ ನದಿಯೂ ಸಂಪೂರ್ಣ ಬತ್ತಿ ಹೋಗಿದ್ದರಿಂದ ಪುರಸಭೆಯಿಂದ ಹೊಸ ಕೊಳವೆಬಾವಿ ಕೊರೆಸಬೇಕಿದೆ ಎನ್ನುವುದು ನಾಗರಿಕರ ಆಗ್ರಹ.

ಮಾನ್ವಿ ಪಟ್ಟಣದಲ್ಲಿ ಐದಾರು ದಿನಕ್ಕೆ ಸರಬರಾಜು ಆಗುವ ನೀರು ಅರ್ಧಗಂಟೆಯೂ ಇರಲ್ಲ. ಕೆಲವು ಬಿಂದಿಗೆ, ಪಾತ್ರೆ ತುಂಬಿಸುವುದರಲ್ಲೇ ಬಂದ್ ಆಗಿಬಿಡುತ್ತದೆ. ಪುರಸಭೆಯವರನ್ನು ಕೇಳಿದರೆ ಮತ್ತೇ ಬರುತ್ತದೆ ಎನ್ನುತ್ತಾರೆ. ಆದರೆ, ನೀರು ಬರಲ್ಲ ಪ್ರತಿದಿನ ನೀರಿಗಾಗಿ ಪರದಾಡುವಂತಾಗಿದೆ. | ಗುರುರಾಜ ಮಾನ್ವಿ ಸ್ಥಳೀಯ ನಿವಾಸಿ. ಕೆರೆಯಲ್ಲಿ 5.8 ಮೀಟರ್‌ನಷ್ಟು ನೀರು ಇದೆ. ತುಂಗಭದ್ರಾ 85ನೇ ಕಾಲುವೆಗೆ ನೀರು ಬಿಡಲಾಗಿದೆ. ಕಾಲುವೆಯಲ್ಲಿ ಗಲೀಜು ಇರುವುದರಿಂದ ಕಾಲುವೆ ನೀರು ಬೇರೆಡೆ ಬಿಟ್ಟು, ಪುರಸಭೆ ಸಿಬ್ಬಂದಿಯನ್ನು ಕಾಲುವೆೆ ಭಾಗದಲ್ಲಿ ನಿಯೋಜಿಸಿ, ಆದಷ್ಟು ಕೆರೆ ತುಂಬಿಸಿ, ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ನಿಗಾವಹಿಸಲಾಗುವುದು. | ಪರಶುರಾಮ ದೇವಮಾನೆ, ಸಿಒ ಪುರಸಭೆ ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net