

ಮಾನ್ವಿಯಲ್ಲಿ ಶರಣ ಸಂಸ್ಕೃತಿ ಉತ್ಸವ
ಮಾನ್ವಿ: ನಾವು ಮಾಡುವ ಸತ್ಕಾರ್ಯದಿಂದ ಗೌರವ ಹೆಚ್ಚಾಗುತ್ತದೆಯೇ ವಿನಃ, ಮೈ ತುಂಬ ಬಂಗಾರದ ಆಭರಣಗಳನ್ನು ಹಾಕಿಕೊಳ್ಳುವುದರಿಂದಲ್ಲ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಬಸವಕೇಂದ್ರದಿಂದ ಬಸವ ಜಯಂತಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿ, ಹೆಚ್ಚು ಆಭರಣ ಇದ್ದಷ್ಟು ಒತ್ತಡಗಳು ಹೆಚ್ಚಾಗುತ್ತವೆ. ಬಂಗಾರಕ್ಕಿಂತ ಮಿಗಿಲಾದ ಜ್ಞಾನವನ್ನು ಹೆಚ್ಚಿಕೊಳ್ಳಬೇಕು ಎಂದರು.
ಶ್ರೀ ಮಠದಿಂದ ನಮಗೆ ಬಂಗಾರದ ಕಿರೀಟ, ಉಂಗುರಗಳು, ಚಂದ್ರಮೌಳೇಶ್ವರ ವಿಗ್ರಹ ದೊರೆತಿದ್ದರೂ ನಾವು ಅವುಗಳನ್ನು ಸ್ವ ವೈರಾಗ್ಯದಿಂದ ಧರಿಸುತ್ತಿಲ್ಲ. ಬಸವ ಪಥದಲ್ಲಿ ನಡೆದವರಿಗೆ ಎಲ್ಲ ಲೌಕಿಕವಾದ ವಸ್ತುಗಳ ಮೇಲೆ ವೈರಾಗ್ಯ ಮೂಡುತ್ತದೆ. ಶಿವಯೋಗದಿಂದ ಪಂಚೇಂದ್ರಿಯಗಳಲ್ಲಿ ಶಿವಕಳೆ ತುಂಬುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನದಲ್ಲಿ ತತ್ವ, ಸಿದ್ಧಾಂತ, ಆಚರಣೆಗಳನ್ನು ಹೊಂದಿರಬೇಕು. ಸಾರ್ವಜನಿಕ ಜೀವನದಲ್ಲಿ ಎಲ್ಲರೊಂದಿಗೂ ಸೌಹಾರ್ದತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ತಿಳಿಸಿದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು 12ನೇ ಶತಮಾನದಲ್ಲಿ ಬಸವಣ್ಣನವರ ಪರಿಕಲ್ಪನೆಯಂತೆ ಶ್ರೀ ಮಠವನ್ನು ಅನುಭವ ಮಂಟಪವನ್ನಾಗಿ ಮಾಡಿ ನಾಡಿನ ಎಲ್ಲ ಜಾತಿ, ಧರ್ಮ, ಸಮುದಾಯದವರಿಗೆ ಬಸವ ಧರ್ಮದ ಸಂಸ್ಕಾರ, ಬಸವ ತತ್ವದ ಶಿಕ್ಷಣ ನೀಡಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಲ್ಲ ಸಮಾಜದ ಪೀಠಗಳಿಗೆ ಗುರುಗಳನ್ನಾಗಿಸುವ ಮೂಲಕ ಎಲ್ಲ ಸಮುದಾಯದವರಿಗೆ ಬಸವಾದಿ ಶರಣರ ತತ್ವ ಸಂದೇಶಗಳು ತಿಳಿಯುವಂತೆ ಮಾಡಿದ್ದಾರೆ ಎಂದರು.