ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಗ್ರಾಮಸ್ಥರು

29102022 Manvi story 1
Published on

ಚೀಕಲಪರ್ವಿ ಸರ್ಕಾರಿ ಪ್ರೌಢಶಾಲೆಗಿಲ್ಲ ಸ್ವಂತ ಕಟ್ಟಡ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ

ಮಾನ್ವಿ: ರಾಜ್ಯದ ಗಡಿಭಾಗವಾದ ತಾಲೂಕಿನ ಚೀಕಲಪರ್ವಿ ಗ್ರಾಮ ಸಮಸ್ಯೆಗಳ ಆಗರವಾಗಿದ್ದು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಲವು ತೊಂದರೆ ಎದುರಿಸುವಂತಾಗಿದೆ.

ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿ ಐದು ವರ್ಷ ಕಳೆದರೂ ಇದುವರೆಗೂ ಸ್ವಂತ ಕಟ್ಟಡ ನಿರ್ಮಿಸಲಾಗಿಲ್ಲ. ಪ್ರಾಥಮಿಕ ಶಾಲೆಯ ಹೊಸ ಕಟ್ಟಡದಲ್ಲೇ ಪ್ರೌಢಶಾಲೆ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ನಡೆಸುವ ಅನಿವಾರ್ಯತೆ ಇದೆ. ಇನ್ನು ಪ್ರೌಢಶಾಲೆಯಲ್ಲಿ ಅಭ್ಯಸಿಸುತ್ತಿರುವ 155 ವಿದ್ಯಾರ್ಥಿಗಳಿಗೆ ಐವರು ಅತಿಥಿ ಶಿಕ್ಷಕರೇ ಆಸರೆ. ಕಾಯಂ ಶಿಕ್ಷಕರ ನೇಮಕಕ್ಕೂ ಇಲಾಖೆ ನಿರ್ಲಕ್ಷಿಸಿದೆ.

ಪ್ರಾಥಮಿಕ ಶಾಲೆಯ ಹೊಸ ಕಟ್ಟಡದಲ್ಲಿ 1ರಿಂದ 7ನೇ ತರಗತಿವರೆಗೆ ಚೀಕಲಪರ್ವಿ, ಯಡಿವಾಳ, ಜಾಗೀರು ಉನ್ನೂರು ಗ್ರಾಮದ 259 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೂ ಕೊಠಡಿಗಳ ಸಮಸ್ಯೆ ಇದೆ. ಅಂಥದ್ದರಲ್ಲಿ ಪ್ರೌಢಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗೂ ಇದೇ ಕಟ್ಟಡದ ಎರಡು ಕೊಠಡಿಗಳನ್ನು ಬಳಸಿಕೊಳ್ಳುತ್ತಿರುವುದು ಸಮಸ್ಯೆಗಳನ್ನು ಸೃಷ್ಟಿಸಿದೆ.
ಮೂಲೆ ಸೇರಿದ ಲ್ಯಾಪ್‌ಟಾಪ್: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗಾಗಿ ತಂದಿದ್ದ ಲ್ಯಾಪ್‌ಟಾಪ್‌ಗಳು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ಮೂಲೆ ಸೇರಿವೆ. ಶಾಲೆಯಲ್ಲಿ ಕೊಠಡಿ ಕೊರತೆ ಇರುವುದರಿಂದ ಲ್ಯಾಪ್‌ಟಾಪ್‌ಗಳು ಬಳಕೆ ಮಾಡುತ್ತಿಲ್ಲ. ಬಿಸಿ ಊಟದ ಕೊಠಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಶಿಕ್ಷಕರ ಕೊಠಡಿಯನ್ನು ಬಿಸಿಯೂಟ ಬಳಕೆಗೆ ನೀಡಲಾಗಿದೆ.

ಗ್ರಾಮದಲ್ಲಿ 4 ಅಂಗನವಾಡಿ ಕೇಂದ್ರಗಳಿದ್ದು ಸ್ವಂತ ಕಟ್ಟಡಗಳನ್ನು ಹೊಂದಿವೆ. ಆದರೆ ಕುಡಿಯುವ ನೀರು, ಇತರ ಮೂಲ ಸೌಲಭ್ಯಗಳ ಕೊರತೆ ಇದೆ. ಗ್ರಾಮದ ಜನತಾ ಕಾಲನಿಯಲ್ಲಿನ ಪ್ರಾಥಮಿಕ ಶಾಲೆಯ ಕಾಂಪೌಂಡ್ ಅನ್ನು ಪೂರ್ಣಗೊಳಿಸಿಲ್ಲ. ಮಳೆ ನೀರುಕೊಯ್ಲುಗೆ ಟ್ಯಾಂಕ್ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಮಳೆ ನೀರುಕೊಯ್ಲು ಟ್ಯಾಂಕ್ ಮುಚ್ಚದೇ ಹಾಗೇ ಬಿಟ್ಟಿದ್ದರಿಂದ ಟ್ಯಾಂಕ್‌ನಲ್ಲಿ ನಿಂತ ನೀರು ಗಬ್ಬು ನಾರುತ್ತಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಚೀಕಲಪರ್ವಿ ಐತಿಹಾಸಿಕ ವಿಜಯದಾಸರ ಕಟ್ಟೆ ಮಳೆ ಬಂದಾಗೆಲ್ಲ ಮುಳುಗಡೆಯಾಗುತ್ತದೆ. ಮಂತ್ರಾಲಯ ಮಠದ ಅಧೀನಕ್ಕೆ ಬಂದ ಮೇಲೆ ಐತಿಹಾಸಿಕ ವಿಜಯದಾಸರ ಕಟ್ಟೆ ಅಭಿವೃದ್ಧಿಯತ್ತ ಸಾಗಿದೆ. ಕಟ್ಟೆಗೆ ಎಷ್ಟೇ ನೀರು ಬಂದರೂ ಮುಳುಗದಂತೆ ತಡೆಗೊಡೆ ನಿರ್ಮಾಣವಾಗಬೇಕು ಎಂಬುದು ಭಕ್ತರ ಆಶಯ.


ಉದ್ಘಾಟನೆಯಾಗದ ಆಸ್ಪತ್ರೆ: ಗಡಿ ಗ್ರಾಮದಲ್ಲಿ ಜನರ ಅನುಕೂಲಕ್ಕಾಗಿ ಆಯುರ್ವೇದಿಕ್ ಚಿಕಿತ್ಸಾಲಯ ಕಟ್ಟಡ ಕಾಮಗಾರಿಗೆ ಕೆಕೆಆರ್‌ಡಿಬಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ 2 ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಹೀಗಾಗಿ ಹಳೇ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುವಂತಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಸೇತುವೆ ಜಲಾವೃತ: ಚೀಕಲಪರ್ವಿ, ಯಡಿವಾಳ, ಜಾಗೀರ್‌ಪನ್ನೂರು ಮತ್ತು ಆಂಧ್ರಪ್ರದೇಶದ ಜನರು ಕೆಲಸಗಳ ನಿಮಿತ್ತ ಮಾನ್ವಿ ಪಟ್ಟಣಕ್ಕೆ ಬರಬೇಕಾದರೆ ಬುದ್ದಿನಿ (ಕೊಡಿಗುಡ್ಡ) ಹಳ್ಳದ ಸೇತುವೆ ದಾಟಿ ಬರಬೇಕು. ಮಳೆಯಾದರೆ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕವೇ ಬಂದ್ ಆಗುತ್ತದೆ. ಶಾಸಕ ರಾಜಾ ವೆಂಕಟಪ್ಪನಾಯಕ ಮಾನ್ವಿಯಿಂದ ಚೀಕಲಪರ್ವಿವರೆಗೆ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗದ ಕಾರಣ ಕಾಮಗಾರಿ ವಿಳಂಬದಿಂದ ಈ ಭಾಗದ ಜನರಿಗೆ ಬೇಸರ ತಂದಿದೆ.

ಚೀಕಲಪರ್ವಿಯಿಂದ ಯಡಿವಾಳದ ವರೆಗಿನ 6-7 ಕಿಮೀ ರಸ್ತೆ ಕಾಮಗಾರಿ ಆಗಬೇಕಿದೆ. ಅರ್ಧ ರಸ್ತೆ ಡಾಂಬರೀಕರಣ ಮಾಡಿ ಇನ್ನರ್ಧ ಹಾಗೇ ಬಿಡಲಾಗಿದೆ. ಕೂಡಲೇ ಉಳಿದ ರಸ್ತೆ ಡಾಂಬರೀಕರಿಣವಾದರೆ ಯಡಿವಾಳ ಮತ್ತು ಜಾಗೀರ್‌ಪನ್ನೂರು ರೈತರಿಗೆ ಅನುಕೂಲವಾಗಲಿದೆ.

ಪಾಳುಬಿದ್ದ ಪುನರ್ವಸತಿ ಮನೆಗಳು: 2009ರಲ್ಲಿ ನೆರೆ ಹಾವಳಿ ಬಂದಾಗ ಇಡೀ ಚೀಕಲಪರ್ವಿ ಗ್ರಾಮ ಮುಳುಗಡೆಯಾಗಿತ್ತು. ತುಂಗಭದ್ರ ನದಿ ದಂಡೆಯ ಗ್ರಾಮವನ್ನು ಸ್ಥಳಾಂತರಿಸಲು ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಚೀಕಲಪರ್ವಿ ಗ್ರಾಮದ ನೆರೆ ಸಂತ್ರಸ್ತರಿಗೆ 554 ಮನೆಗಳು ನಿರ್ಮಾಣ ಮಾಡಿಕೊಟ್ಟಿದ್ದರು. ಆದರೆ, ಗ್ರಾಮಸ್ಥರು ಮಾತ್ರ ಪುನರ್ವಸತಿ ಕೇಂದ್ರಗಳಿಗೆ ಬಾರದೇ 554 ಮನೆಗಳು ಹಾಳಾಗಿವೆ.

ಪ್ರತಿವರ್ಷ ನದಿಗೆ ಹೆಚ್ಚುವರಿ ನೀರು ಬಂದಾಗ ನದಿ ದಂಡೆಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುತ್ತದೆಯೇ ವಿನಃ ಹೊಸ ಗ್ರಾಮದಲ್ಲಿ ನಿರ್ಮಿಸಿದ ಮನೆಗಳಿಗೆ ಜನರು ಬರುತ್ತಿಲ್ಲ. ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿದ ಮನೆಗಳಿಗೆ ಹಳೇ ಗ್ರಾಮ ಬಹಳ ದೂರವಾಗುತ್ತದೆ ಎಂದು ಜನರು ಹಿಂದೇಟು ಹಾಕುತ್ತಿದ್ದಾರೆ.

ನೆರೆ ರಾಜ್ಯದವರಿಗೆ ದಾಸೋಹ: ನೆರೆ ರಾಜ್ಯ ಆಂಧ್ರದ ಗಡಿ ಭಾಗದ ಜನರು ಮಾನ್ವಿ ಪಟ್ಟಣದಲ್ಲಿ ಕೆಲಸ ನಿಮಿತ್ತ ಬರುವ ನೆರೆ ರಾಜ್ಯದ ಜನರು ತಿರುಗಿ ಸ್ವಗ್ರಾಮಕ್ಕೆ ಹೋಗಲು ನದಿ ಬಂದರೆ, ನದಿ ದಾಟಲು ಸಮಯವಾದರೆ ಅಂತಹ ಜನರಿಗೆ ರುದ್ರಮುನೀಶ್ವರ ಶ್ರೀಮಠದಲ್ಲಿ ದಾಸೋಹ ಮಾಡಿ ವಿಶ್ರಾಂತಿ ಪಡೆಯುತ್ತಾರೆ. ಶ್ರೀಮಠದ ಸದಾಶಿವ ಶ್ರೀಗಳು ಮಠಕ್ಕೆ ಬಂದವರಿಗೆಲ್ಲ ಪ್ರಸಾದ ನೀಡುತ್ತಿರುವುದು ನೆರೆ ರಾಜ್ಯದವರಿಗೆ ಅನುಕೂಲವಾಗಿದೆ.

ಚೀಕಲಪರ್ವಿ ಗ್ರಾಮದಲ್ಲಿ ಒಂದು ಬಸ್ ನಿಲ್ದಾಣವಿಲ್ಲ. ಗ್ರಾಮದಿಂದ ಮಾನ್ವಿ ಪಟ್ಟಣಕ್ಕೆ ಹೋಗುವ ಪ್ರಯಾಣಿಕರು ಮಳೆ, ಬಿಸಿಲಲ್ಲಿ ಕೂಡ ರಸ್ತೆಯಲ್ಲಿ ನಿಲ್ಲಬೇಕಾಗುವುದು ಅನಿವಾರ್ಯ.| ಶ್ರೀ ಸದಾಶಿವ ಸ್ವಾಮೀಜಿ ರುದ್ರಮುನೀಶ್ವರ ಮಠ, ಚೀಕಲಪರ್ವಿ

ಸರ್ಕಾರಿ ಪ್ರೌಢಶಾಲೆಗೆ ಕಾಯಂ ಶಿಕ್ಷಕರಿಲ್ಲ. ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಇದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಕಾಯಂ ಶಿಕ್ಷಕರನ್ನು ನೇಮಿಸಬೇಕು.| ಮಲ್ಲನಗೌಡ ಗ್ರಾಮಸ್ಥ, ಚೀಕಲಪರ್ವಿ

ಚೀಕಲಪರ್ವಿ ಸರ್ಕಾರಿ ಪ್ರಾಥಮಿಕ ಶಾಲೆ ಉನ್ನತೀಕರಿಸಲಾಗಿದೆ. ಹೀಗಾಗಿ 1ರಿಂದ 10ನೇ ತರಗತಿವರೆಗೆ ಇದೇ ಕಟ್ಟಡದಲ್ಲಿ ತರಗತಿಗಳು ನಡೆಯುತ್ತವೆ. ಪ್ರೌಢಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಿ, ಒಬ್ಬರು ಕಾಯಂ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಹಿಂದೆ ಶಾಲೆಗೆ ಶಿಕ್ಷಕರ ತೊಂದರೆ ಇತ್ತು. ಇದೀಗ ಅದನ್ನು ಬಗೆಹರಿಸಲಾಗಿದೆ.| ಚಂದ್ರಶೇಖರ ದೊಡ್ಡಮನಿ ಬಿಇಒ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net