

ಮಾನ್ವಿ: ಬೆಳೆ ಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದರ್ ಅಬ್ದುಲ್ ವಾಹೀದ್‌ಗೆ ಬಿಜೆಪಿ ರೈತ ಮೋರ್ಚಾ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು.
ತಾಲೂಕು ಅಧ್ಯಕ್ಷ ರುದ್ರಗೌಡ ಮದ್ಲಾಪುರ ಮಾತನಾಡಿ, ನಿರಂತರ ಮಳೆಗೆ ಹತ್ತಿ, ತೊಗರಿ ಸೇರಿ ಇತರ ಬೆಳೆಗಳು ಶೇ.90 ಹಾಳಾಗಿವೆ. ರೈತರು ಸಾಲ ತೆಗೆದುಕೊಂಡು ಎಕರೆಗೆ ಸಾವಿರಾರು ರೂ. ಖರ್ಚು ಮಾಡಿದ್ದರು. ಆದರೆ, ಮಳೆಯಿಂದ ಬೆಳೆ ನಷ್ಟವಾಗಿದೆ. ಆದ್ದರಿಂದ ಸರ್ಕಾರ ಬೆಳೆನಷ್ಟ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರು ಸಾಲದ ಸುಳಿಗೆ ಸಿಲುಕಲಿದ್ದಾರೆ ಎಂದರು.
ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳೆಹಾನಿ ಸಮೀಕ್ಷೆ ಸರಿಯಾಗಿ ಮಾಡುತ್ತಿಲ್ಲ. ಇದರೊಂದಿಗೆ ಹಲವಾರು ಲೋಪದೋಷಗಳಿಂದ ಶೇ.50 ಬೆಳೆಗಳ ಮಾಹಿತಿಯನ್ನು ಸರಿಯಾಗಿ ತಯಾರಿಸದ ಕಾರಣ ರೈತರು ಬೆಳೆ ನಷ್ಟ ಪರಿಹಾರ ಪಡೆಯುವುದರಿಂದ ವಂಚಿತರಾಗಲಿದ್ದಾರೆ. ಬೆಳೆ ಸಮೀಕ್ಷೆ ಸರಿಯಾಗಿ ಮಾಡಿ ನಷ್ಟ ಅನುಭವಿಸಿದ ರೈತರಿಗೆ ನ್ಯಾಯಯುತ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಗೌಡ ಭೋಗಾವತಿ, ಮುಖಂಡರಾದ ಗುರುಸಿದ್ದಪ್ಪ ಕಣ್ಣೂರು, ಜೆ. ಸುಧಾಕರ, ವೀರನಗೌಡ ವಕೀಲ, ಬಸವರಾಜ ನಕ್ಕುಂದಿ, ಶ್ರೀಕಾಂತ ಗೂಳಿ, ವಿರೂಪಾಕ್ಷಿ ನುಗಡೋಣಿ, ಶಿವಲಿಂಗಯ್ಯಸ್ವಾಮಿ, ರವಿಕುಮಾರ ಅಲ್ದಾಳ ಇತರರಿದ್ದರು.