

ಮಾನ್ವಿ: ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಎಂದು ಕಾಣದ ಮತಗಳು ಬಂದಿವೆ. ನಾನು ಸೋತಿಲ್ಲ. ಸೋಲಿನಲ್ಲಿ ಗೆಲವು ಕಂಡಿದ್ದೇನೆ. ನನಗೆ ಬೆಂಲಿಸಿದ ಮತದಾರನ್ನು ಮರೆಯೋದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ. ಇಲ್ಲೇ ಇದ್ದು ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತೇನೆ. ನನಗೆ 59,203 ಮತಗಳು ಬಂದಿವೆ. ಇದು ಸಣ್ಣದಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಬಲಿಸಿದ ಪರಿಣಾಮ ಇಷ್ಟು ಮತಗಳು ಬಂದಿವೆ. ಅಲ್ಲಲ್ಲಿ ಸಣ್ಣ-ಪುಟ್ಟ ಲೋಪ ದೋಷಗಳು ನಡೆದಿವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದರು.
ನಾನು ಯಾವುದೇ ಅಮಿಷ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ, ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷದಲ್ಲಿ ಇದ್ದು ಜನರಿಗೆ ನ್ಯಾಯ ಕೊಡಿಸುತ್ತೇನೆ. ನಾನು ಎಂದೂ ಸಣ್ಣ ರಾಜಕಾರಣ ಮಾಡಿಲ್ಲ, ಮಾಡೋದೂ ಇಲ್ಲ. ಅಲ್ಪ ಸಮಯದಲ್ಲಿ ಇಷ್ಟು ಮತಗಳು ಬಂದಿವೆ. ಲೋಕಸಭೆಗೆ ನಿಲ್ಲುವ ಪ್ರಶ್ನೆ ಇಲ್ಲ ಎಂದರು.
ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮುಖಂಡರಾದ ಮಲ್ಲನಗೌಡ ನಕ್ಕುಂದಿ, ಶರಣಪ್ಪಗೌಡ ನಕ್ಕುಂದಿ, ಅಯ್ಯಪ್ಪ ಮ್ಯಾಕಲ್, ಶಿವಶರಣಗೌಡ ಲಕ್ಕಂದಿನ್ನಿ, ನಾಗಲಿಂಸ್ವಾಮಿ, ಶ್ರೀಕಾಂತ ಗೂಳಿ, ಎಸ್.ಮಹ್ಮದ್, ರಾಹುಲ್ ಕಲಂಗೇರಾ, ಗುರುಗೌಡ, ಸೈಯ್ಯದ್ ಉಸ್ಮಾನ್ ಇನ್ನಿತರರು ಇದ್ದರು.