ಬೆಳೆ ವಿಮೆ ಪರಿಹಾರ ಮತ್ತೊಬ್ಬರ ಖಾತೆಗೆ ಜಮೆ!

manvi-niravari
Published on

ಮಾನ್ವಿ: ಅರ್ಹ ಫಲಾನುಭವಿಗಳಿಗೆ ದೊರಯಬೇಕಿದ್ದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಹಣ ಅಧಿಕಾರಿಗಳ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿರುವುದು ರೈತರಿಗೆ ಅಚ್ಚರಿ ಮೂಡಿಸಿದೆ.

2022-23ನೇ ಸಾಲಿನಲ್ಲಿ ಹಳ್ಳಿ ಹೊಸೂರು ಗ್ರಾಮದ ಅರ್ಹ ರೈತರಿಗೆ ಹಣ ಸಂದಾಯವಾಗಿಲ್ಲ. ಅಧಿಕಾರಿಗಳು ನಮ್ಮಿಂದ ಪಹಣಿ ಇತರ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಬೇರೆಯರಿಗೆ ಬೆಳೆವಿಮೆ ಹೇಗೆ ಪಾವತಿಸಿದ್ದಾರೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ರೈತರು ಬೆಳೆ ನಷ್ಟಗೊಂಡಾಗ ಯೋಜನೆ ಮೂಲಕ ವಿಮೆ ಪಡೆಯಬಹುದಾಗಿದೆ. ಆದರೆ, ಅರ್ಹರಿಗೆ ಬೆಳೆ ವಿಮೆ ಜಮೆಯಾಗಿಲ್ಲ. ಯೋಜನೆ ಉದ್ದೇಶವನ್ನು ಅಧಿಕಾರಿಗಳು ಮರೆತು ಮತ್ತೊಬ್ಬರ ಖಾತೆಗೆ ಹಣ ಜಮೆ ಮಾಡಿರುವ ಅಂಶ ಬೆಳಕಿಗೆ ಬರಬೇಕಾಗಿದೆ.

ವಿದ್ಯಾ ಗಂಡ ಶಿವಕುಮಾರ ಹೆಸರಿನ ಸರ್ವೇ ನಂ.1 ಮತ್ತು 105ರ 12 ಎಕರೆ ಹೊಲದ ಮೇಲೆ ರೈತರಿಗೆ ಗೊತ್ತಿಲ್ಲದೆ ಬೆಳೆ ವಿಮೆ ಮಾಡಿಸಿ ಒಟ್ಟು 1.86 ಲಕ್ಷ ರೂ. ಶಿವನಪ್ಪ ಎಂಬುವವರ ಖಾತೆಗೆ ಜಮೆ ಮಾಡಿಸಲಾಗಿದೆ.

ಅದೇ ರೀತಿ ಶಿವಪ್ಪ ತಂದೆ ಲಿಂಗಣ್ಣ ಸರ್ವೇ ನಂ.32ರ 11.18 ಎಕರೆಗೆ 1.62 ಲಕ್ಷ ರೂ., ಶಿವಪ್ಪ, ಬಸನಗೌಡ ಸರ್ವೇ ನಂ.36ರ 7 ಎಕರೆಗೆ 1.12 ಲಕ್ಷ ರೂ., ಮಂಜುಳಾ ಬಾಲಪ್ಪ ಸರ್ವೇ 108ರ 9 ಎಕರಗೆ 1.42 ಲಕ್ಷ ರೂ. ಹಾಗೂ ಲಿಂಗಪ್ಪ ಕುಂಬಾರ ಎಂಬ ರೈತ ನಿಧನರಾಗಿ 8 ವರ್ಷ ಕಳೆದಿದ್ದು, ಅವರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಪಾವತಿಸಲಾಗಿದೆ. ಒಂದೇ ಗ್ರಾಮದ 38 ರೈತರ ಅಂದಾಜು 75 ಲಕ್ಷಕ್ಕೂ ಅಧಿಕ ಹಣ ಸಂರಕ್ಷಣಾ ವಿಮೆ ಕಂಪನಿಯವರು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಅವೈಜ್ಞಾನಿಕ ಯೋಜನೆ

ಬೆಳೆವಿಮೆ ಯೋಜನೆ ಅವೈಜ್ಞಾನಿಕವಾಗಿದ್ದು, ರೈತರಿಗೆ ಲಾಭವಿಲ್ಲ. ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶ ಅಡಗಿದೆ. ವಿಮೆ ಕಂತು ಕಟ್ಟಿದರೂ ಹಣ ರೈತರ ಖಾತೆಗೆ ಜಮೆಯಾಗುತ್ತಿಲ್ಲ. ರೈತರ ಗಮನಕ್ಕೆ ಇಲ್ಲದೇ ನಾನಾ ಸರ್ವೇ ನಂ. ಮೇಲಿನ ವಿಮೆ ಮಾಡಿಸಿ ಬೇರೆಯವರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿದೆ. ಇದರಲ್ಲಿ ವಿಮೆ, ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಸಹಾಯಕ ಕೃಷಿ ನಿರ್ದೇಶಕ, ಜಂಟಿ ಕೃಷಿ ನಿರ್ದೇಶಕರಿಗೆ ರೈತರು ಬೆಳೆವಿಮೆಯಿಂದ ಅನ್ಯಾಯಕ್ಕೊಳಗಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಕೃಷಿ ಅಧಿಕಾರಿಗಳು ವರದಿ ಪರಿಶೀಲಿಸಿದ ನಂತರ ಬೇರೆಯವರ ಖಾತೆಗೆ ವಿಮೆ ಪರಿಹಾರ ಜಮೆ ಆಗಿರುವ ತಿಳಿದಿದೆ.

ಅಲ್ಲದೆ, ಕೆಲ ರೈತರ ಜಮೀನಿನಲ್ಲಿ ಹತ್ತಿ ಬೆಳೆದರೂ ಭತ್ತ ಎಂದು, ಭತ್ತ ಬೆಳೆಯುವ ಕಡೆ ಹತ್ತಿ ಇತರ ಬೆಳೆ ದಾಖಲಿಸಿ ವಿಮೆ ಹಣ ದುರುಪಯೋಗ ಮಾಡಲಾಗಿದೆ. ಸರ್ಕಾರ ಬೆಳೆವಿಮೆ ಹಣ ದುರುಪಯೋಗ ಮಾಡಿದ ಜಾಲ ಪತ್ತೆ ಹಚ್ಚಿ ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಒದಗಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಹಳ್ಳಿಹೊಸೂರು ಗ್ರಾಮದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಣ ಬೇರೆಯವರ ಖಾತೆಗೆ ಜಮೆಯಾಗಿರುವ ಬಗ್ಗೆ ರೈತರಿಂದ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ.ದೇವಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ರಾಯಚೂರು

ಎರಡ್ಮೂರು ವರ್ಷ ವಿಮೆ ಹಣ ಪಾವತಿಸಿದರೂ ಪರಿಹಾರ ಬಂದಿಲ್ಲ. ಈ ಬಾರಿ ಗ್ರಾಮದ ಕೆಲವರಿಗೆ ಬಂದಿದೆ ಎಂಬುದು ತಿಳಿಯಿತು. ಈ ಕುರಿತು ಕೃಷಿ ಅಧಿಕಾರಿಗೆ ವಿಚಾರಿಸಿದಾಗ ವಿಮೆ ಅಧಿಕಾರಿ ಶಂಕರಗೌಡಗೆ ಕೇಳಿ ಎಂದರು. ಅವರನ್ನು ಭೇಟಿಯಾದರೂ ಪ್ರಯೋಜವಾಗಲಿಲ್ಲ. ಕೃಷಿ ಜೆಡಿ ಕಚೇರಿಗೆ ಹೋಗಿ ಹೊಲದ ಪಹಣಿ, ಆಧಾರ್‌ಕಾರ್ಡ್‌ನಿಂದ ಕಂಪ್ಯೂಟರ್‌ನಲ್ಲಿ ಚೆಕ್ ಮಾಡಲಾಯಿತು. ಆಗ ಬೇರೆಯರ ಖಾತೆ ಜಮೆಯಾಗಿರುವುದು ತಿಳಿಯಿತು. ಗ್ರಾಮದ ಅನೇಕ ರೈತರಿಗೆ ಅನ್ಯಾಯವಾಗಿದೆ. ಜಿಲ್ಲಾ ಕೃಷಿ ಅಧಿಕಾರಿಗೆ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ. ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ.ಅತ್ತನೂರು ಶಿವಪ್ಪಗೌಡ, ಹಳ್ಳಿಹೊಸೂರು ರೈತ

ಹಳ್ಳಿಹೊಸೂರು ಗ್ರಾಮದ ರೈತರ ಬೆಳೆವಿಮೆ ಪರಿಹಾರ ಬೇರೆಯವರ ಖಾತೆ ಜಮೆಯಾಗಿರುವ ಬಗ್ಗೆ ಜಿಲ್ಲಾ ಜಂಟಿ ಕೃಷಿ ಅಧಿಕಾರಿ ಗಮನಕ್ಕೆ ತರಲಾಗಿದೆ. ಗ್ರಾಮದ ಬಹುತೇಕ ರೈತರಿಗೆ ಅನ್ಯಾಯವಾಗಿರುವ ದೂರು ಬರುತ್ತಿವೆ. ಅದಷ್ಟು ಬೇಗ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಲಾಗುವುದು.ಹುಸೇನ್ ಸಾಹೇಬ್ಸಹಾಯಕ ಕೃಷಿ ನಿರ್ದೇಶಕ ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net