ರಾಜಲಬಂಡಾ ಬಳಿ ತೆಲಂಗಾಣ ರೈತರ ಪ್ರತಿಭಟನೆ

Telangana Farmers Protest Rajalabanda
ಮಾನ್ವಿ ತಾಲೂಕಿನ ರಾಜಲಬಂಡಾ ಅಣೆಕಟ್ಟು ಪ್ರದೇಶದ ಬಳಿ ತೆಲಂಗಾಣ ರೈತರು ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿದರು.
Published on

ಮಾನ್ವಿ: ರಾಯಲ್‌ಸೀಮಾ ಭಾಗದಲ್ಲಿ ನಿರ್ಮಸಲಾಗುತ್ತಿರುವ ಏತ ನೀರಾವರಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿ ತೆಲಂಗಾಣ ರೈತರು ತಾಲೂಕಿನಲ್ಲಿ ರಾಜಲಬಂಡಾ ಗ್ರಾಮದ ತುಂಗಭದ್ರಾ ನದಿಗೆ ನಿರ್ಮಿಸಿರುವ ಅಣೆಕಟ್ಟು ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಮಾತನಾಡಿ, 1996ರಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ನಿರ್ಣಯದಂತೆ ರಾಜಲಬಂಡಾ ಅಣೆಕಟ್ಟು 17 ಟಿಎಂಸಿ ನೀರು ಅವಿಭಜಿತ ಆಂಧ್ರಪ್ರದೇಶಕ್ಕೆ ಮತ್ತು 1.2 ಟಿಎಂಸಿ ನೀರು ಕರ್ನಾಟಕಕ್ಕೆ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆಂಧ್ರ ಪ್ರದೇಶ-ತೆಲಂಗಾಣ ವಿಭಜನೆಯಾದ ಮೇಲೆ ಆಂಧ್ರ ಸರ್ಕಾರ ಹೆಚ್ಚುವರಿಯಾಗಿ 4 ಟಿಂಎಂಸಿ ನೀರು ಪಡೆಯುತ್ತಿದೆ. ಇದರಿಂದ ತೆಲಂಗಾಣ ಮತ್ತು ಕರ್ನಾಟಕ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯಲು ಹೋರಾಟ ಮಾಡುತ್ತೇವೆ. ಮಣಿಯದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

60 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟಿಗೆ ಕಟ್ಟಿದ ತಡೆಗೊಡೆ ಎತ್ತರ ಹೆಚ್ಚಿಸಲು ರಾಯಲ್‌ಸೀಮಾ ಭಾಗದ ರೈತರು ಕಾಮಗಾರಿಗೆ ಅಡ್ಡಿಪಡಿಸಿದ್ದರು. ಆಂಧ್ರ ವಿಭಜನೆಯಾದ ಮೇಲೆ ಇದೇ ರಾಯಲ್‌ಸೀಮಾ ಭಾಗದ ರೈತರು ತಡಗೊಡೆ ಎತ್ತರ ಹೆಚ್ಚಿಸಲು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಕರ್ನಾಟಕ ಮತ್ತು ತೆಲಂಗಾಣ ರೈತರಿಗೆ ಅನ್ಯಾಯವಾಗಲಿದೆ. ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ ಎಂದರು.

ಜಗಳ, ಹೊಡೆದಾಟ ನಡೆದೆಯಿದೆ
ಹಲವು ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರೈತರಿಗೆ ಆಗಾಗ ನೀರಿಗಾಗಿ ಜಗಳ ನಡೆಯುತ್ತಲೇ ಇದೆ. ಕೆಲವೊಮ್ಮೆ ಹೊಡೆದಾಟವೂ ನಡೆದಿದೆ. ರಾಜಲಬಂಡಾ ತಡೆಗೋಡೆಗೆ ನಿರ್ಮಿಸಿದ ಅಣೆಕಟ್ಟಿನಿಂದ ಅತಿ ಹೆಚ್ಚು ನೀರು ಪಡೆಯುವವರೇ ತೆಲಂಗಾಣ ಮತ್ತು ಆಂಧ್ರದ ರೈತರು. ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯದ ಅತಿ ಹೆಚ್ಚು ರೈತರ ಹೊಲಗಳೇ ಮುಳುಗಿವೆ. ಆದರೆ, ಅತಿ ಕಡಿಮೆ ನೀರು ಸಿಗುತ್ತಿವೆ.

ಕರ್ನಾಟಕ ಪೊಲೀಸರಿಗೆ ತಲೆನೋವು
ಜೂ. 24 ರಂದು ಪ್ರತಿಭಟನೆಗೆ ಬಂದಿದ್ದ ರೈತರನ್ನು ಆಂಧ್ರದ ಕೊತ್ತದೊಡ್ಡಿಯಲ್ಲಿ ತಡೆದು ಹಿಂದಕ್ಕೆ ಕಳಿಸಲಾಗಿತ್ತು. ಆದರೆ, ತೆಲಂಗಾಣ ರೈತರು ರಾಜಲಬಂಡಾ ಅಣೆಕಟ್ ಹತ್ತಿರ ಬಂದು ಪ್ರತಿಭಟನೆ ನಡೆಸಿದ್ದಾರೆ. ಆಂಧ್ರ, ತೆಲಂಗಾಣ ರೈತರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದು ರಾಜ್ಯದ ಪೊಲೀಸರಿಗೆ ತಲೆ ನೋವಾಗಿದೆ.

ಆಂಧ್ರ ಸರ್ಕಾರ ರಾಯಲ್‌ಸೀಮಾ ಭಾಗದಲ್ಲಿ ಕಾಲುವೆ ನೀರು ಪಡೆದು ಏತ ನೀರಾವರಿ ನಿರ್ಮಾಣ ಮಾಡುತ್ತಿದೆ. ಇದರಿಂದ ತೆಲಂಗಾಣ ರೈತರಿಗೆ ನೀರಿನ ಕೊರತೆಯಾಗಲಿದೆ. ಕೂಡಲೇ ಏತ ನೀರಾವರಿ ಕಾಮಾಗರಿ ನಿಲ್ಲಿಸಬೇಕು.| ಶ್ರೀನಿವಾಸ ರೆಡ್ಡಿ ತೆಲಂಗಾಣ ವಿಕಾಸ ಸಮಿತಿ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net