

ಮಾನ್ವಿ: ಭೂರಹಿತ ರೈತರಿಗೆ ಸಾಗುವಳಿ ಮಾಡಲು ಹಕ್ಕು ಪತ್ರ ನೀಡಲು ಒತ್ತಾಯಿಸಿ ಅಖಿಲ ಭಾರತ ಕಿಸಾನ ಸಂಘಟನೆ ತಾಲೂಕು ಸಮಿತಿ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕಿನ ಕುರ್ಡಿ, ಕಂಬಳತ್ತಿ, ಗೋರ್ಕಲ್, ಚೀಕಲಪರ್ವಿ, ಬುದ್ದಿನ್ನಿ, ದದ್ದಲ್, ಜಾಗೀರ್ ಪನ್ನೂರ್, ಮದ್ಲಾಪೂರ್ ಸೇರಿ ವಿವಿಧ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ಭೂರಹಿತ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರಿ ಜಮೀನುಗಳನ್ನು ಕೂಡಲೇ ಪಂಚನಾಮೆ ಮಾಡಿಸಿ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ತಾಲೂಕು ಸಮಿತಿ ಅಧ್ಯಕ್ಷ ವಿ.ಮುದುಕಪ್ಪ ನಾಯಕ ಒತ್ತಾಯಿಸಿದರು.
ಮಾನ್ವಿ ತಾಲೂಕಿನ ಬುರಹಾನಪುರ್ ಗ್ರಾಮದಲ್ಲಿನ ಸರ್ಕಾರಿ ಜಮೀನಿನಲ್ಲಿ ವಿವಿಧ ಗ್ರಾಮಗಳ ನಿವೇಶನ ರಹಿತ ಬಡವರನ್ನು ಗುರುತಿಸಿ ಹಂಚಿಕೆ ಮಾಡಬೇಕು. ಅಕ್ರಮ ನೀರಾವರಿ ಮೇಲೆ ಕ್ರಮ ಕೈಗೊಂಡು ಕೆಳಭಾಗದ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಬೇಕು. ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ, ಸೇರಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.