

ಮಾನ್ವಿ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ರಾಯಚೂರು ಜಿಲ್ಲೆಯ ಅಭಿವೃದ್ಧಿ ಹಾಗೂ ಈ ಭಾಗದ ಜನರ ಉತ್ತಮ ಆರೋಗ್ಯಕ್ಕಾಗಿ ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಏಮ್ಸ್ ಹೋರಾಟ ಸಮಿತಿ ಮಾನ್ವಿ ಘಟಕದ ಸಂಚಾಲಕ ಎಚ್.ಶರ್ಫುದ್ದೀನ್ ಪೋತ್ನಾಳ ಒತ್ತಾಯಿಸಿದರು.
ಪ್ರಧಾನಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ರಾಜು ಪಿರಂಗಿಗೆ ಸಲ್ಲಿಸಿ ಸೋಮವಾರ ಮಾತನಾಡಿದರು. ಜಿಲ್ಲೆಗೆ ಮಂಜೂರಾಗಬೇಕಾದ ಐಐಟಿ, ಟೆಕ್ಸ್‌ಟೈಲ್ ಪಾರ್ಕ್, ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಹುಬ್ಬಳಿ-ಧಾರವಾಡಕ್ಕೆ ಸ್ಥಳಾಂತರಿಸುತ್ತಿರುವುದರಿಂದ ಪ್ರಾದೇಶಿಕ ಅಸಮಾನತೆ ಉಂಟಾಗುತ್ತಿದೆ ಎಂದು ದೂರಿದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಹುಬ್ಬಳಿ ಮತ್ತು ಧಾರವಾಡದಲ್ಲಿ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಲ್ಲಾ ಏಮ್ಸ್ ಹೋರಾಟ ಸಮಿತಿ ವತಿಯಿಂದ ಕಳೆದ 900 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಅದ್ದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜಿಲ್ಲಾ ಏಮ್ಸ್ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಮುಖರಾದ ರಾಜಾ ಸುಭಾಷಚಂದ್ರ ನಾಯಕ, ರಾಜು ತಾಳಿಕೋಟೆ, ಭೀಮರಾಯ ಸಿತಿಮನಿ, ಎಂ.ಡಿ.ಹಾರೂನ್, ಹುಸೇನ್ ಬಾಷಾ, ಅಲೀಖಾನ್, ಮೋದಿನ್ ಸಾಬ್, ರಾಚಪ್ಪ, ಎಂಎಎಚ್ ಮುಖಿಂ, ಮಹಾಂತೇಶ ಓಲೇಕಾರ ಇನ್ನಿತರರು ಇದ್ದರು.