

ಮಾನ್ವಿ: ಏಮ್ಸ್ ಸಂಸ್ಥೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ತಾಲೂಕು ಘಟಕ ಬುಧವಾರ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ತಾಲೂಕು ಸಮಿತಿ ಸಂಚಾಲಕ ಮನೋಜ್ ಕುಮಾರ ಮಿಶ್ರಾ ಮಾತನಾಡಿ, ಹಿಂದುಳಿದ ರಾಯಚೂರು ಜಿಲ್ಲೆ ಅಭಿವೃದ್ಧಿಗೆ ಹಾಗೂ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರೆಯಲು ಏಮ್ಸ್ ಸ್ಥಾಪನೆ ಮಾಡಬೇಕು.
ರಾಯಚೂರು ನಗರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪಿಸುವಂತೆ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಏಮ್ಸ್ ಸ್ಥಾಪನೆ ಬಗ್ಗೆ ರಾಜ್ಯ ಸರ್ಕಾರವು ಎರಡು ಬಾರಿ ಪತ್ರ ಬರೆದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
ಕೇಂದ್ರದ ಹಲವು ಮಹಾತ್ವಾಕಾಂಕ್ಷೆ ಯೋಜನೆಗಳು ಹುಬ್ಬಳ್ಳಿ ಪಾಲಾಗಿವೆ. ಕೇಂದ್ರ ಸರ್ಕಾರ ಏಮ್ಸ್ ಸ್ಥಾಪನೆ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿ ಪ್ರಮುಖರಾದ ಎಚ್. ಶರ್ಫುದ್ದೀನ್ ಪೋತ್ನಾಳ್, ರಾಜಾ ಸುಭಾಶ್ಚಂದ್ರ ನಾಯಕ, ರಾಜು ತಾಳಿಕೋಟೆ, ಅನಿಲ್ ಕುಮಾರ, ಎಂ.ಎ.ಎಚ್. ಮುಖಿಮ್, ಭೀಮರಾಯ ಸೀತಿಮನಿ, ಶಿವಕುಮಾರ ನಾಯಕ, ನವೀನ್ ಕುಮಾರ್ ಇತರರಿದ್ದರು.