

ಮಾನ್ವಿ: ತಾಲೂಕಿನ ರಬಣಕಲ್, ಮದ್ಲಾಪುರ ಮತ್ತು ಹಾಲಾಪುರ ಹೋಬಳಿ ವ್ಯಾಪ್ತಿಯ ಗದ್ದೆಗಳಿಗೆ ಬುಧವಾರ ರೈತರ ದೂರಿನನ್ವಯ ಕೃಷಿ ವಿಜ್ಞಾನಿಗಳ ತಂಡ ಮತ್ತು ಮಾನ್ವಿ ಸಹಾಯಕ ಕೃಷಿ ನಿರ್ದೇಶಕರು ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ಕೃಷಿ ವಿಜ್ಞಾನಿಗಳ ತಂಡದ ಮುಖ್ಯಸ್ಥ ಹಾಗೂ ತಳಿ ತಜ್ಞ ಮಹಾಂತ ಶಿವಯೋಗಿ ಮಾತನಾಡಿ, ರಬ್ಬಣಕಲ್, ಮದ್ಲಾಪುರ, ಗೂಗೇಬಾಳ ಭಾಗದ ರೈತರು ಡಿಸೆಂಬರ್ ಅಂತ್ಯ ಮತ್ತು ಜನವರಿ ಮೊದಲ ವಾರದಲ್ಲಿ ಆರ್‌ಎನ್‌ಆರ್ 93 ತಳಿಯ ಭತ್ತ ನಾಟಿ ಮಾಡಿದ್ದಾರೆ. ಈ ಬೆಳೆಯಲ್ಲಿ ಮೊದಲನೇ ಹಂತವಾಗಿ ಹೊಡೆ ಒಡೆದು ತೆನೆ ಬಂದಿದ್ದರಿಂದ ಕಾಳುಗಳು ಹಾಲು ತುಂಬಿ ಗಟ್ಟಿಯಾಗದೇ ಜೊಳ್ಳಲಾಗಿವೆ. ಅಲ್ಲದೆ ಈ ಬೆಳೆಯು ರಾತ್ರಿ ವೇಳೆ ವಾತಾವರಣದಲ್ಲಾಗುವ ಉಷ್ಣಾಂಶ ಬದಲಾವಣೆಗೆ ತೀವ್ರವಾಗಿ ಸ್ಪಂದಿಸುತ್ತಿದೆ. ಉಷ್ಣತೆ ಕಡಿಮೆಯಾದಾಗ ಗಂಡು ಪರಾಗ ನಿಷ್ಕ್ರಿಯವಾಗುತ್ತದೆ. ಹೀಗಾಗಿ ಕಾಳುಗಳು ಹಾಲು ತುಂಬದೆ ಜೊಳ್ಳಾಗುತ್ತವೆ. ಫೆಬ್ರವರಿ ತಿಂಗಳಲ್ಲಿ ಒಂದು ವಾರ ಮೋಡ ಕವಿದ ವಾತಾವರಣವಿದ್ದರಿಂದ ರಾತ್ರಿ ಉಷ್ಣಾಂಶ ಕಡಿಮೆ ಇತ್ತು. ಹೀಗಾಗಿ ಭತ್ತದ ಕಾಳು ಜೊಳ್ಳಾಗಿವೆ ಎಂದು ತಿಳಿಸಿದರು.
ಕೀಟ ತಜ್ಞ ಡಾ. ಸುಜಯ್, ಬೀಜ ತಾಂತ್ರಿಕ ತಜ್ಞ ಡಾ.ದೊಡ್ಡಗೌಡ, ಬೇಸಾಯ ತಜ್ಞ ಡಾ.ಉಮೇಶ, ಮಾನ್ವಿ ಕೃಷಿ ಸಹಾಯಕ ನಿರ್ದೇಶಕ ಬಿ. ಹುಸೇನ್‌ಸಾಹೇಬ್, ಸಹಾಯಕ ಕೃಷಿ ಅಧಿಕಾರಿಗಳಾದ ಯಂಕಣ್ಣಯಾದವ್, ನಿಯಾಜ್ ಆಹ್ಮದ್ ಮತ್ತು ರೈತರಿದ್ದರು.