ನಿಗದಿತ ಸಭೆ ತಾತ್ಕಾಲಿಕ ಮುಂದೂಡಿಕೆ; ಕರ್ನಾಟಕ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಮಾಹಿತಿ

18082020 Manvi Chamras Mali Patil
Published on

ಆ. 20 ರಂದು ನಡೆಯಬೇಕಿದ್ದ ಸಭೆ

ಮಾನ್ವಿ: ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾದ ಪರಿಣಾಮ ಅಕ್ರಮ ನೀರಾವರಿ ತಡೆಯುವ ಕುರಿತು ಆ. 20 ರಂದು ನಿಗದಿಯಾಗಿದ್ದ ಸಭೆಯನ್ನು ತಾತ್ಕಲಿಕವಾಗಿ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಹಾಗೂ ತುಂಗಭದ್ರಾ ಎಡದಂಡೆ ನಾಲೆ ರೈತ ಹಿತ ರಕ್ಷಣಾ ಸಮಿತಿ ಸಂಚಾಲಕ ಚಾಮರಸ ಮಾಲಿಪಾಟೀಲ್ ಹೇಳಿದರು.

ಜಲಸಂಪನ್ಮೂಲ ಸಚಿವರು, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉಭಯ ಜಿಲ್ಲೆಗಳ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ನೀರಾವರಿ ಅಧಿಕಾರಿಗಳು, ರೈತ ಮುಖಂಡರ ಸಭೆಯನ್ನು ಮುಂದೂಡಲಾಗಿದೆ. ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ಸಚಿವರು, ಶಾಸಕರು ತೊಡಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೂ ರೈತಸಂಘ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅಕ್ರಮ ಪೈಪ್‌ಲೈನ್ ಮತ್ತು ಪಂಪ್‌ಸೆಟ್, ವಿದ್ಯುತ್ ಅಳವಡಿಕೆ ಮೂಲಕ ಅನಧಿಕೃತ ನೀರಾವರಿ ಸೌಲಭ್ಯಕ್ಕೆ ಕಡಿವಾಣ ಹಾಕಿ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರಿಗಾಗಿ ನಿರಂತರವಾಗಿ ರೈತ ಸಂಘ ಮತ್ತು ಜನಪ್ರತಿನಿಧಿಗಳು, ರೈತ ಮುಖಂಡರು ಹೋರಾಡುತ್ತ ಬಂದರೂ ನ್ಯಾಯ ಸಿಗುತ್ತಿಲ್ಲ. ಈಗ ಅಕ್ರಮ ನೀರಾವರಿ ತಡೆಯುವವರೆಗೂ ಹೋರಾಟ ನಿಲ್ಲದು ಎಂದರು.

ಆ.6 ರಂದು ರೈತರ ಹಿತ ರಕ್ಷಣಾ ಸಮಿತಿ ಪ್ರತಿಭಟನೆ ನಡೆಸುವುದಿತ್ತು. ಜಲಸಂಪನ್ಮೂಲ, ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಭರವಸೆ ನೀಡಿ 18ಕ್ಕೂ ಹೆಚ್ಚು ಕಡೆಗಳಲ್ಲಿನ ಅಕ್ರಮ ಪೈಪ್‌ಲೈನ್ ತೆರವು ಮಾಡಿ, ವಿದ್ಯುತ್ ಸಂಪರ್ಕ ಕಡಿತ ಗೊಳಿಸಿದ್ದಾರೆ. ಮೈಲ್ 47ರಲ್ಲಿ ಗೇಜ್ ಕಾಯ್ದುಕೊಂಡಿರುವುದರಿಂದ ಕೆಳಭಾಗದ ಕಾಲುವೆಗೆ ವಾರಾಬಂದಿ ಮೂಲಕ ಸಮರ್ಪಕವಾಗಿ ನೀರು ಹರಿದು ಬರುತ್ತಿವೆ ಎಂದರು.

ಗೊಬ್ಬರ ಕೊರತೆ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ರೈತರು ಬಿತ್ತಿದ ಬೆಳೆಗಳಿಗೆ ಯೂರಿಯಾ ಗೊಬ್ಬರ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸಬೇಕು, ಭೂಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗ ಸರ್ಕಾರದ ಕ್ರಮ ಸರಿಯಲ್ಲ, ಸರ್ಕಾರ ಕಾರ್ಪೋರೇಟ್ ಕಂಪನಿಗಳ ಪರ ಲಾಬಿ ನಡೆಸುವುದನ್ನು ನಿಲ್ಲಿಸಬೇಕು ಎಂದರು.

ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಲಿಂಗಾರೆಡ್ಡಿ ಪಾಟೀಲ್, ರೈತ ಮುಖಂಡರಾದ ಸೂಗುರಯ್ಯಸ್ವಾಮಿ ಆರ್.ಎಸ್.ಮಠ, ಎಸ್.ರಾಘವೇಂದ್ರ, ಅಮರಯ್ಯಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net