

ಮಾನ್ವಿ: ಮನುಷ್ಯನಿಗೆ ಬದುಕಿನಲ್ಲಿ ಸಾಧನೆ ಮಾಡಲು ತಾಳ್ಮೆ ಅತ್ಯಗತ್ಯ ಎಂದು ಹಾಲ್ವಿ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದಲ್ಲಿ ರುದ್ರಮುನೀಶ್ವರ ಶಿವಯೋಗಿಗಳ 95ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ನಾಲ್ವತವಾಡ ವೀರೇಶ್ವರ ಶರಣರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಶರಣರ ವಿಚಾರಗಳನ್ನು ಆಲಿಸಿದಾಗ ಜೀವನ ಸಾರ್ಥಕವಾಗಲಿದೆ. ನಾಡಿನಲ್ಲಿ ಅನೇಕ ಸಂತರು, ಶರಣರು, ಶಿವಯೋಗಿಗಳು ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅವರ ಹಿತನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ತಾಳ್ಮೆ ಕಳೆದುಕೊಂಡರೆ ಏನೂ ಸಾಧಿಸಲಾಗದು. ಅಲ್ಲದೆ ಆರೋಗ್ಯ ಕೂಡಾ ಹಾಳಾಗಲಿದೆ. ಶರಣರ ವಚನಗಳನ್ನು ಓದುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು. ಆ.18ವರೆಗೆ ಪ್ರವಚನ ನಡೆಯಲಿದ್ದು, ಪ್ರತಿಯೊಬ್ಬರು ಆಲಿಸಬೇಕು ಎಂದು ಮನವಿ ಮಾಡಿದರು.
ಯಡ್ರಾಮಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಾಲ್ವತವಾಡದ ವೀರೇಶ್ವರ ಪುರಾಣ ಪ್ರವಚನ ನಡೆಸಿಕೊಟ್ಟರು. ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ಯದಲದೊಡ್ಡಿ ಸುವರ್ಣಗಿರಿ ಮಠದ ಮಹಾಲಿಂಗ ಸ್ವಾಮೀಜಿ, ಅರಳಹಳ್ಳಿ ಶರಣಬಸವ ದೇವರು ಆಶೀರ್ವಚನ ನೀಡಿದರು. ಪ್ರಮುಖರಾದ ವಿರೂಪಾಕ್ಷಯ್ಯಸ್ವಾಮಿ ವಂದಲಿ, ಮದ್ಲಾಪೂರದ ಸಿದ್ದಯ್ಯಸ್ವಾಮಿ ಇತರರಿದ್ದರು.