

ತುಮಕೂರು : ಉಪಚುನಾವಣೆ ಸಂದರ್ಭದಲ್ಲಿ ಶಿರಾ ತಾಲೂಕಿನ ಜನರಿಗೆ ನೀಡಿದ್ದ ಭರವಸೆ ಉಳಿಸಿಕೊಳ್ಳಲು ಶಾಸಕ ಡಾ.ರಾಜೇಶ್‌ಗೌಡ ಒದ್ದಾಡುತ್ತಿದ್ದು, ಆಡಳಿತದ ಪಕ್ಷದ ಶಾಸಕರಾಗಿದ್ದರೂ ಜನರನ್ನು ಕರೆದುಕೊಂಡು ಬಂದು ಮದಲೂರು ಕೆರೆಗೆ ನೀರು ಬಿಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸ್ಥಿತಿ ಬಂದಿದೆ.
ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಅವರನ್ನು ಭೇಟಿಯಾದ ಡಾ.ರಾಜೇಶ್‌ಗೌಡ ನೇತೃತ್ವದ ಶಿರಾ ತಾಲೂಕಿನ ಬಿಜೆಪಿ ಮುಖಂಡರ ತಂಡ, ಮದಲೂರು ಕೆರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನಾಲೆಯಿಂದ ನೀರು ಹರಿಸಬೇಕು ಎಂದು ಮನವಿ ಮಾಡಿಕೊಂಡರು.
ಶಾಸಕ ಡಾ. ರಾಜೇಶ್‌ಗೌಡ ಮಾತನಾಡಿ, ಪಟ್ರಾವತನಹಳ್ಳಿ ಎಸ್ಕೇಪ್ ಚಾನಲ್ ಮೂಲಕ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸುತ್ತಿದ್ದು, ಬಹುತೇಕ ತುಂಬುವ ಹಂತದಲ್ಲಿದೆ. ಈ ಬಾರಿ ಉತ್ತಮವಾಗಿ ಮಳೆ ಬಂದಿರುವುದರಿಂದ ಬೇಗ ತುಂಬುವ ವಿಶ್ವಾಸವಿದ್ದು, ಮದಲೂರು ಕೆರೆಗೂ ನೀರು ಹರಿಸಬೇಕು ಎಂದು ಕೇಳಿಕೊಂಡರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಈಗಾಗಲೇ ಭೇಟಿಯಾಗಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಲಾಗಿದೆ. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ನೀರು ಹರಿಸುವ ಭರವಸೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದಲೂ ಯಾವುದೇ ತಡೆಯಾಗಬಾರದು ಎಂದು ಮನವಿ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಮನವಿ ಮಾಡಲಾಗಿದೆ, ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೊಟ್ಟ ಭರವಸೆಯಂತೆ ಕಳೆದ ವರ್ಷ ನೀರು ಹರಿಸಿದ್ದರು. ಅದೇ ರೀತಿ ಈ ಬಾರಿಯೂ ಹರಿಸುವಂತೆ ಮನವಿ ಮಾಡಲಾಗಿದೆ ಎಂದರು.
ಮದಲೂರು ಚಿಕ್ಕಕೆರೆಗೆ ನೀರು ಹರಿಸಿದರೆ ಸುತ್ತಮುತ್ತಲ 40-50 ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಕೃಷಿಗೆ ನೀರು ಹರಿಸಿದರೆ ತಾಂತ್ರಿಕ ಸಮಸ್ಯೆ ಎದುರಾಗಲಿವೆ. ಆದರೆ, ಕುಡಿಯುವ ನೀರಿಗೆ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಾಧೀಕರಣವೇ ಹೇಳಿದೆ, ಹಾಗಾಗಿ, ನಾವು ಕೇಳುತ್ತಿರುವುದು ಕುಡಿಯಲು ವಾತ್ರ ಎಂದರು.
ಸ್ಥಳೀಯ ಮುಖಂಡರಾದ ಶ್ರೀನಿವಾಸ್, ಹೆಂಜಲಗೆರೆ ಮೂರ್ತಿ, ಹನುಮಂತನಾಯಕ್, ನಟರಾಜು, ನರೇಂದ್ರ, ಮದಲೂರು ಮೂರ್ತಿ ಮಾಸ್ಟರ್, ಮಾರುತೇಶ್, ಮಧು, ರಂಗಸ್ವಾಮಿ, ವಿಜಯರಾಜು, ಸಿ.ಎಲ್.ಗೌಡ, ಬಸವರಾಜು, ಗಿರಿಧರ್, ರವಿಕುವಾರ್ ಮತ್ತಿತರರು ಇದ್ದರು.
21ರಿಂದ ಕಾಂಗ್ರೆಸ್ ಪಾದಯಾತ್ರೆ? : ಮದಲೂರು ಕೆರೆ ತುಂಬಿಸುವ ಯೋಜನೆ ಹೋರಾಟದ ಹಾದಿ ಹಿಡಿದಿದ್ದು, ಮದಲೂರಿನಿಂದ-ತುಮಕೂರಿಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಆ.21ರಂದು ಮದಲೂರಿನಿಂದ ಪಾದಯಾತ್ರೆ ಆರಂಭವಾಗಲಿದೆ. ಎರಡು ದಿನದಲ್ಲಿ ತುಮಕೂರು ತಲುಪಲಿದ್ದು, ಆ.23ರಂದು ತುಮಕೂರು ನಗರದಲ್ಲಿರುವ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ. ಮದಲೂರು ಕೆರೆಗೆ ಹೇಮಾವತಿ ಅಲೋಕೇಷನ್ ಇಲ್ಲ ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗೆ ಹೇಳಿಕೆ ನೀಡಿದ್ದ ನಂತರ ಶಿರಾ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕ ಡಾ.ರಾಜೇಶ್‌ಗೌಡ ವಿರುದ್ಧ ಮುಗಿಬಿದ್ದಿವೆ.
ಉಪಚುನಾವಣೆ ಸಂದರ್ಭದಲ್ಲಿ ಜನರಿಗೆ ಮಾತುಕೊಟ್ಟಂತೆ ಮದಲೂರು ಕೆರೆಗೆ ನೀರು ಹರಿಸಲು ಮಾಜಿ ಸಿಎಂ, ಸಿಎಂ ಇಬ್ಬರೂ ಒಪ್ಪಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಲ್ಲಿಯೂ ಮನವಿ ಮಾಡಿದ್ದು, ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿವರ್ಷ ನೀರು ಹರಿಸಬೇಕು. ಈ ನಿಟ್ಟಿನಲ್ಲಿ ಡಿಸಿಗೆ ಮನವಿ ಸಲ್ಲಿಸಲಾಗಿದೆ. ಡಾ.ರಾಜೇಶ್‌ಗೌಡ, ಶಾಸಕ, ಶಿರಾ