

ಸುಬ್ರಹ್ಮಣ್ಯ: ಹಿಂದಿನ ಹಿರಿಯರು ಶ್ರಮಪಟ್ಟು ರಚಿಸಿದ ಗ್ರಂಥಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಹಸ್ತಪ್ರತಿಗಳು ಪ್ರಾಚೀನರು ರಚಿಸಿದ ಅತ್ಯಮೂಲ್ಯ ಆಸ್ತಿಗಳು. ಅವುಗಳನ್ನು ರಕ್ಷಣೆ ಮಾಡದಿದ್ದರೆ ಅವರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶ್ರೀ ವೇದವ್ಯಾಸ ಸಂಶೋಧನಾ ಕೇಂದ್ರ ಶ್ರೀ ಸುಬ್ರಹ್ಮಣ್ಯ ಮಠ, ರಾಷ್ಟ್ರೀಯ ಪಾಂಡು ಲಿಪಿ ಮಿಶನ್ ನವದೆಹಲಿ ಆಶ್ರಯದಲ್ಲಿ ಮಠದಲ್ಲಿ ೨೧ ದಿನಗಳ ಹಸ್ತಪ್ರತಿ ಸಂರಕ್ಷಣಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಆಶೀರ್ವಚನ ನೀಡಿದರು.
ಹಸ್ತಪ್ರತಿ ಸಂರಕ್ಷಣೆ ಜತೆಗೆ ಭಾರತೀಯ ಲಿಪಿಗಳ ಕಲಿಕೆ ಮತ್ತು ಅಧ್ಯಯನವೂ ಅಗತ್ಯ. ಸಂಶೋಧನಾತ್ಮಕ ಹಂತಗಳಿಂದ ಪ್ರಾಚೀನ ಹಸ್ತಪ್ರತಿಯ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಲಿಪಿಗಳ ಪ್ರತಿಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಯ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ದೆಹಲಿ ಎನ್‌ಎಂಎಂ ಮುಖ್ಯಸ್ಥ ಲಕ್ಷ್ಮೀನಾರಾಯಣ ಪಾಣಿಗ್ರ, ಸಂಶೋಧಕರಾದ ಡಾ.ಕೆ.ಎಸ್.ಎನ್.ಉಡುಪ, ಕೆಳದಿ ಸಾಂಸ್ಕೃತಿಕ ಮ್ಯೂಸಿಯಂ ನಿರ್ದೇಶಕ ಡಾ.ಜಿ.ವಿ.ಕಲ್ಲಪುರ, ಪ್ರಮುಖರಾದ ರವಿರಾಜ್ ಉಪಸ್ಥಿತರಿದ್ದರು. ಮಠದ ಕಾರ‌್ಯದರ್ಶಿ ಶ್ರೀಕೃಷ್ಣ ಶರ್ಮ ವಂದಿಸಿದರು. ೨೧ ದಿನ ನಡೆಯುವ ಕಾರ್ಯಾಗಾರದಲ್ಲಿ ಹಸ್ತ ಪ್ರತಿಗಳ ಸಂರಕ್ಷಣೆ, ಸಂರಕ್ಷಣಾ ವಿಧಾನ, ಲಿಪಿಗಳ ಕಲಿಕೆ, ಹಸ್ತಪ್ರತಿ ಶಾಸ್ತ್ರದ ಪರಿಚಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಿಸಲಿದ್ದಾರೆ.
ಸಂಶೋಧನಾತ್ಮಕ ಅಧ್ಯಯನದಲ್ಲಿ ಅದರ ಮೂಲ ಹಾಗೂ ಹಿಂದಿನ ಹಿನ್ನೆಲೆಗಳು ಅಗತ್ಯ. ಅವುಗಳನ್ನು ಸಂಶೋಧಕ ಜನರಿಗೆ ತಿಳಿಸಬೇಕು. ಒಬ್ಬ ವ್ಯಕ್ತಿಯ ಬರವಣಿಗೆ ಶೈಲಿಯಿಂದ ಆತನ ವ್ಯಕ್ತಿತ್ವ ತಿಳಿಯಬಹುದು. ಹಸ್ತಪ್ರತಿಗಳು ಪ್ರಾಚೀನತೆಯ ಪ್ರಧಾನ ಆಕರಗಳಾಗಿದ್ದು ಅವುಗಳನ್ನು ಉಳಿಸಿ ಬೆಳೆಸಬೇಕು. ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಂಗಳೂರು ವಿವಿ ಕುಲಪತಿ