ಸೊರಗುತ್ತಿರುವ ವಿದ್ವತ್ ಕ್ಷೇತ್ರ: ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಂ.ತಳವಾರ್ ವಿಷಾದ

Manuscript Conference mandya
Published on

ಮಂಡ್ಯ: ಸಮಗ್ರ ಕೃತಿಗಳ ಅಧ್ಯಯನಕ್ಕೆ ತೊಡಗುವವರು ಸಂಖ್ಯೆ ವಿರಳವಾಗುತ್ತಿದೆ. ಪರಿಣಾಮ ವಿದ್ವತ್ ಕ್ಷೇತ್ರ ಸೊರಗುತ್ತಿದೆ. ಇಂತಹ ಬಿಕ್ಕಟ್ಟಿನ ಕಾಲದಲ್ಲಿ ಹಸ್ತಪ್ರತಿ ಸಮ್ಮೇಳನ ಏರ್ಪಡಿಸಿರುವುದು ಶ್ಲಾಘನೀಯ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಂ.ತಳವಾರ್ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ಶಾಸ್ತ್ರ ವಿಭಾಗ, ಕರ್ನಾಟಕ ಸಂಘ, ಮದ್ದೂರು ಎಚ್.ಕೆ.ವೀರಣ್ಣಗೌಡ ಕಾಲೇಜು ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನ ಅಖಿಲ ಕರ್ನಾಟಕ ಇಪ್ಪತ್ತನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಡಾ.ಎಫ್.ಟಿ.ಹಳ್ಳಿಕೇರಿ ಅವರ ಹಸ್ತಪ್ರತಿ ವ್ಯಾಸಂಗ-23 ಹಾಗೂ ಡಾ.ಗುರುಪಾದಮರಿಗುದ್ದಿ ಅವರ ಡಾ.ರಾಗೌ ಸಾಹಿತ್ಯ ಮಂಥನ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜತೆಗೆ ಮಾಲ್ವಿಕವಾದುದನ್ನು ಬರೆಯುವವರ ಸಂಖ್ಯೆಯೂ ವಿರಳವಾಗುತ್ತಿದೆ. ವಿದ್ವಾಂಸರು ಮತ್ತು ಸಾಹಿತಿಗಳಿಗೆ ಶೈಕ್ಷಣಿಕ ಶಿಸ್ತು ಇರಬೇಕು. ಮಾತ್ರವಲ್ಲದೆ ಓದುವುದು ಮತ್ತು ಮೌಲ್ವಿಕ ಬರವಣಿಗೆಗೆ ಒತ್ತು ನೀಡಬೇಕು. ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರತರುವುದು ಶೈಕ್ಷಣಿಕ ಸಾಧನೆ. ಕನ್ನಡ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ. ಕಳೆದ ಬಾರಿ ನಡೆದ ಸಮ್ಮೇಳನದಲ್ಲಿ ಪ್ರಬಂಧ, ಹಸ್ತಪ್ರತಿ ವ್ಯಾಸಂಗ ಆಗಿ ಇಂದು ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಂತಹ ಪುಸ್ತಕಗಳನ್ನು ಸಿದ್ಧಪಡಿಸುವುದು ಸುಲಭವಲ್ಲ. ಬಹಳ ಜನ ವಿದ್ವಾಂಸರು ಮಾತನಾಡುತ್ತಾರೆ. ಆದರೆ, ಬರೆದುಕೊಡುವುದಿಲ್ಲ. ಅವರಿಂದ ಬರೆಸಿ ಹಸ್ತಪ್ರತಿ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.

ಹಸ್ತಪ್ರತಿಗಳ ಸಂಗ್ರಹ ಇಂದು ಅಗತ್ಯವಾಗಿದೆ. ಹಸ್ತಪ್ರತಿ ಸಮ್ಮೇಳನದ ವರದಿ ಒಟ್ಟಾರೆಯಾಗಿ ಹಸ್ತಪ್ರತಿ ಎಂದರೇನು, ಅವುಗಳ ಸ್ವರೂಪ, ಜ್ಞಾನ, ನಿರ್ಮಾಣ ಮಾಡುವ ವಿಧಾನ ಇತ್ಯಾದಿ ಇವೆಲ್ಲವೂ ಪ್ರಾಚೀನ ಸಾಹಿತ್ಯದ ಕುರಿತಾಗಿ ಕನ್ನಡದ ಸಂಶೋಧಕರಿಗೆ ಉತ್ತಮ ಆಕಾರ ಗ್ರಂಥವಾಗಿದೆ. ಇಂತಹ ಗ್ರಂಥಗಳನ್ನು ಸಿದ್ಧಪಡಿಸಿರುವುದು ಶ್ಲಾಘನೀಯ. ಹಸ್ತಪ್ರತಿಗಳು ನಾಡಿನ ಸಾಂಸ್ಕೃತಿಕ ಸಂಪತ್ತು. ಅವುಗಳ ಸಂರಕ್ಷಣೆ, ಅಧ್ಯಯನ, ಪ್ರಕಟಣೆ ಕಾರ್ಯ ತುರ್ತಾಗಿ ಆಗಬೇಕಿದೆ. ಈ ಬಗ್ಗೆ ಕನ್ನಡ ವಿಶ್ವವಿದ್ಯಾಲಯ ವ್ರತದ ಹಾಗೆ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಮ.ರಾಮಕೃಷ್ಣ ಸಮಾರಂಭ ಉದ್ಘಾಟಿಸಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಹಿರಿಯ ವಿದ್ವಾಂಸ ಡಾ.ರಾಮೇಗೌಡ, ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರನಾಥ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಯುವ ಮುಖಂಡ ಗುರುಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net