ಮಳೆಗೆ ಕೊಚ್ಚಿ ಹೋದ ಗೊಬ್ಬರ

26 vpt 5
ವಿರಾಜಪೇಟೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ನದಿ ತೀರದ ಕೃಷಿ ಭೂಮಿ ಮುಳುಗಡೆಯಾಗಿರುವುದು.
Published on

ವಿರಾಜಪೇಟೆ: ಕೆಲ ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ಹಲವಾರು ಮರಗಳು ನೆಲಕ್ಕುರುಳಿವೆ.

ಹಲವೆಡೆ ಹಾದು ಹೋಗುವ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಗ್ರಾಮೀಣ ಪ್ರದೇಶಗಳಾದ ಬೊಳ್ಳರಿ ಮಾಡು, ಕೊಟ್ಟೋಳಿ, ಬೇಟೋಳಿ, ಹೆಗ್ಗಳ, ತೋರ, ಪೆರುಂಬಾಡಿ, ಪಾಲಂಗಾಲ, ಕೆದಮುಳ್ಳೂರು, ಬೂದಿಮಾಳ ಆರ್ಜಿ, ಚಿಟ್ಟಡೇ, ಅಂಬಟ್ಟಿ ಮುಂತಾದ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ವಿದ್ಯುತ್ ಕಡಿತವಾಗಿದ್ದು, ಜನರು ಕತ್ತಲಿನಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೊಂದೆಡೆ ಕೃಷಿ ಚಟುವಟಿಕೆಗೆ ಭೂಮಿ ಉಳುಮೆ ಮಾಡಿಸುವ ಕಾರಣ ಗದ್ದೆಗಳಿಗೆ ಹಾಕಿದ ಸಗಣಿ ಗೊಬ್ಬರ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿದೆ. ನದಿ ತೀರದ ಪ್ರದೇಶಗಳಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದ್ದು ಗದ್ದೆಗಳಿಗೆ ಹಾಕಿದ ಸಗಣಿ ಗೊಬ್ಬರ ಕೊಚ್ಚಿಕೊಂಡು ನದಿಯನ್ನು ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಗ್ರಾಮೀಣ ಭಾಗದ ಸಣ್ಣಪುಟ್ಟ ತೋಡುಗಳು, ಕೆರೆ, ನದಿ ತುಂಬಿ ಹರಿಯುತ್ತಿದೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ವಿರಾಜಪೇಟೆ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಎರಡು ದಿನದಿಂದ ಹೆಚ್ಚಿದ ಭಾರಿ ಗಾಳಿ ಮಳೆ ಪರಿಣಾಮವಾಗಿ ತಾಲೂಕಿನಾದ್ಯಂತ ಅಂದಾಜಿನ ಪ್ರಕಾರ 120ಕ್ಕೂ ಹೆಚ್ಚಿನ ಕಂಬಗಳು ಮುರಿದು ಬಿದ್ದಿದ್ದು ಭಾನುವಾರ ಸಂಜೆಗೆ ವಿರಾಜಪೇಟೆ ನಗರದ ಲೈನ್‌ನ ಸಮಸ್ಯೆ ನಿವಾರಿಸಲಾಗಿದೆ. ಇನ್ನು ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕಂಬಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು ನಿರಂತರ ಮಳೆ ನಡುವೆಯೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net