ಕೋ ಆಪರೇಟಿವ್ ಕೋರ್ಸ್ ಸದುಪಯೋಗಕ್ಕೆ ಮನುಮುತ್ತಪ್ಪ ಮನವಿ

27adarshkdga6
Published on

ಮಡಿಕೇರಿ: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಡಿಗೆ ಸಹಕಾರ ಸಂಘಗಳ ಕಡೆಗೆ ಅಭಿಯಾನವನ್ನು ೨೦೨೩ ರಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ತಿಳಿಸಿದರು.


ನಗರದ ಕರ್ನಾಟಕ ಇನ್ಸ್‌ಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಹಕಾರ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ತರಬೇತಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.


ಜಿಲ್ಲಾ ಸಹಕಾರ ಒಕ್ಕೂಟದ ಮೂಲಕ ಸಹಕಾರ ಶಿಕ್ಷಣವನ್ನು ಯುವಜನರಿಗೆ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಹಕಾರ ತರಬೇತಿ ಕೇಂದ್ರದ ಮೂಲಕ ೬ ತಿಂಗಳ ಡಿಪ್ಲೋಮ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ವರ್ಷಕ್ಕೆ ಎರಡು ಬಾರಿ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ೮ ಸಹಕಾರ ತರಬೇತಿ ಕೇಂದ್ರಗಳಿದ್ದು, ಕೊಡಗು ಜಿಲ್ಲೆಯಲ್ಲಿ ೧೯೫೫ ರಲ್ಲಿ ಪ್ರಥಮ ಬಾರಿಗೆ ಸಹಕಾರ ತರಬೇತಿ ಕೇಂದ್ರ ಆರಂಭವಾಗಿದೆ. ಕೊಡಗು, ಹಾಸನ, ಸುಳ್ಯ ಭಾಗದ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಅವಕಾಶವನ್ನು ಯುವಜನರು ಬಳಸಿಕೊಳ್ಳುವಂತಾಗಬೇಕು ಎಂದು ಮನುಮುತ್ತಪ್ಪ ಕೋರಿದರು.


ಸಹಕಾರ ಕ್ಷೇತ್ರದಲ್ಲಿನ ವಿವಿಧ ಉದ್ಯೋಗಗಳಿಗೆ ಸಹಕಾರ ತರಬೇತಿ ಅನುಕೂಲವಾಗಲಿದೆ. ಕಳೆದ ವರ್ಷ ೧೦ ರಲ್ಲಿ ೫ ರ‌್ಯಾಂಕ್‌ಗಳನ್ನು ನಗರದ ಇನ್ಸ್‌ಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ. ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಅಳವಡಿಸಿಕೊಳ್ಳಲಾಗಿದ್ದು, ವಾಣಿಜ್ಯ ಬ್ಯಾಂಕುಗಳಲ್ಲಿ ಸಹ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು. ಇದರಿಂದ ಬ್ಯಾಂಕ್ ಕ್ಷೇತ್ರದಲ್ಲಿ ಸುಧಾರಣೆಯಾಗಲಿದೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ೨೧ ಶಾಖೆಗಳನ್ನು ಒಳಗೊಂಡಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಕರ್ನಾಟಕ ಇನ್ಸ್‌ಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರಾಂಶುಪಾಲೆ ಡಾ.ಆರ್.ಎಸ್.ರೇಣುಕಾ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ತರಬೇತಿ ಕೇಂದ್ರ ಮೂಲಕ ೬ ತಿಂಗಳ ಕೋಆಪರೇಟಿವ್ ಕೋರ್ಸ್‌ನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತದೆ. ಹಾಗೆಯೇ ಸಹಕಾರ ಸಂಸ್ಥೆಯಲ್ಲಿ ಖಾಯಂ ಸಿಬ್ಬಂದಿಗಳಿಗೆ ದೂರಶಿಕ್ಷಣದಲ್ಲಿ ಡಿಪ್ಲೋಮಾ ಇನ್ ಕೋ ಆಪರೇಟಿವ್ ತರಬೇತಿಯನ್ನು ವರ್ಷಕ್ಕೆ ಎರಡು ತಂಡದಂತೆ ನಡೆಸಲಾಗುತ್ತದೆ ಎಂದರು.


ಸಹಕಾರ, ಸಹಕಾರ ಪತ್ತು ಮತ್ತು ಬ್ಯಾಂಕಿಂಗ್, ಸಹಕಾರ ಸಂಘಗಳ ನಿರ್ವಹಣೆ, ಸಹಕಾರ ಸಂಘಗಳ ಕಾಯ್ದೆ, ಸಹಕಾರ ಲೆಕ್ಕಶಾಸ್ತ್ರ ಮತ್ತು ಲೆಕ್ಕ ಪರಿಶೋಧನೆ ಮತ್ತು ಕಂಪ್ಯೂಟರ್ ಆಪರೇಟರ್ ಹೀಗೆ ಹಲವು ಪಠ್ಯ ವಿಷಯಗಳನ್ನು ಒಳಗೊಂಡಿದೆ. ಸಹಕಾರ ತತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಸಹಕಾರ ಸಂಸ್ಥೆಗಳನ್ನು ರಚಿಸಲು ನೆರವಾಗುವುದು. ಸಹಕಾರ ಸಂಘ ಸಂಸ್ಥೆಗಳನ್ನು ಸುಲಲಿತವಾಗಿ ಕಾನೂನು ಬದ್ಧವಾಗಿ ನಡೆಸಿಕೊಂಡು ಹೋಗಲು ತಿಳುವಳಿಕೆ ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಪ್ರಾಂಶುಪಾಲರು ವಿವರಿಸಿದರು.
ರೆಗ್ಯುಲರ್ ಕೋರ್ಸ್ ಪ್ರವೇಶ ಪಡೆಯಲು ಎಸ್ಸೆಸ್ಸೆಲ್ಸಿ ಆಗಿದ್ದು, ಪ್ರವೇಶ ಪಡೆದ ಎಲ್ಲರಿಗೂ ಶಿಷ್ಯವೇತನ ನೀಡಲಾಗುವುದು. ವಸತಿ ನಿಲಯ ಸೌಲಭ್ಯವಿದೆ ಎಂದರು.


ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಕನ್ನಂಡ ಸಂಪತ್, ರವಿಬಸಪ್ಪ, ಉಪನ್ಯಾಸಕರಾದ ಸಂಜೀವ, ಕವಿತಾ, ಜಿಲ್ಲಾ ಸಹಕಾರ ಯೂನಿಯನ್‌ನ ಮಂಜುಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net