

ಮಂಡ್ಯ: ಜಿಲ್ಲೆಯಲ್ಲಿ ಮಲ ಹೊರುವ ಮತ್ತು ತೆಗೆಯುವ ವೃತ್ತಿ ಮಾಡುತ್ತಿದ್ದ 850 ಕುಟುಂಬವನ್ನು ಗುರುತಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುನರ್ ವಸತಿ ಯೋಜನೆಯಡಿ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮ್ಯಾನುಯೆಲ್ ಸ್ಕ್ಯಾವೆಂಜರ್ ಹಾಗೂ ಸಪಾಯಿ ಕರ್ಮಚಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ 2016 ರಿಂದ 2020 ರವರೆಗೆ ಸರ್ವೆ ನಡೆಸಿ 850 ಕುಟುಂಬವನ್ನು ಗುರುತಿಸಿ 2013ರ ಎಂಎಸ್ ಕಾಯ್ದೆ ಪ್ರಕಾರ ಫಲಾನುಭವಿಗಳು ಎಂದು ಘೋಷಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಸವಲತ್ತು ಕಲ್ಪಿಸಿಲ್ಲ ಎಂದು ದೂರಿದರು.
ಸರ್ಕಾರ ಗುರುತಿಸಿರುವ 850 ಮ್ಯಾನುಯೆಲ್ ಸ್ಕ್ಯಾವೆಂಜರ್ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ತಲಾ ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ಅವರ ಮಕ್ಕಳಿಗೆ ನವೋದಯ ವಸತಿ ಶಾಲೆಗಳಲ್ಲಿ ನೇರ ಪ್ರವೇಶ ನೀಡಬೇಕು. ನಿವೇಶನ ರಹಿತರಾಗಿದ್ದಲ್ಲಿ ನಿವೇಶನ ನೀಡಿ ವಸತಿ ನಿರ್ಮಿಸಿ ಕೊಡಬೇಕು. 60 ವರ್ಷ ತುಂಬಿರುವವರಿಗೆ ಕನಿಷ್ಟ 10 ಸಾವಿರ ರೂ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಚೆಲುವರಾಜು, ದಿನೇಶ್, ಮಹೇಶ್, ಕರ್ಪ, ಸುಲೋಚನಾ, ಸಂತೋಷ್, ಮಂಜುಳಾ, ನರಸಮ್ಮ ಇತರರಿದ್ದರು.