

ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜರ್ ವೃತ್ತಿಯಲ್ಲಿದ್ದವರನ್ನು ಗುರುತಿಸಲು ಸೂಕ್ತ ಕ್ರಮ ವಹಿಸಬೇಕೆಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ (ಎಂಆರ್ ಪಿಎಸ್) ಆಗ್ರಹಿಸಿದೆ.
ಸುಪ್ರೀಂ ಕೋರ್ಟ್ ಡಾ. ಬಲರಾಮ ಸಿಂಗ್ ಪ್ರಕರಣದಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ತೀರ್ಪಿನ ಅನ್ವಯ ದೇಶಾದ್ಯಂತ ಮ್ಯಾನ್ಯುವಲ್ ಸ್ಕಾವೆಂಜರ್ ಗಳನ್ನು ಗುರುತಿಸಲು ಮರುಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆದೇಶ ಮಾಡಿದೆ.
ಈ ಹಿನ್ನೆಲೆಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಅಡಿಯಲ್ಲಿ ನಿಗದಿಪಡಿಸಿದ ಸೌಲಭ್ಯಗಳು ಅವರಿಗೆ ತಲುಪಲು ಸಹಾಯ ಒದಗಿಸಬೇಕು ಪ್ರತಿಭಟನೆ ಮೂಲಕ ಒತ್ತಾಯಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತರು, ಪಾಲಿಕೆ ಹಿರಿಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಬಿ.ಎಂ. ಮತ್ತು ವಲಯ ಕಚೇರಿ 5ರ ಉಪ ಆಯುಕ್ತ ಆನಂದ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಸದಸ್ಯರಾದ ಸೀಮಾ ಮೊಗಲಿಶೆಟ್ಟರ್, ಸುನೀತಾ ಮಾಳವದಕರ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಎಂಆರ್ಪಿಎಸ್ ರಾಜ್ಯ ವಕ್ತಾರ ಮಂಜುನಾಥ ಕೊಂಡಪಲ್ಲಿ ಮಾತನಾಡಿದರು.
ಮುಖಂಡರಾದ ಸಿದ್ದು ಮೊಗಲಿಶೆಟ್ಟರ್, ಸಂಜಯ ಮಾಳವಾದಕರ, ಎಂಆರ್ಪಿಎಸ್ ಧಾರವಾಡ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಎಂ, ಕರ್ನಾಟಕ ಪರಿಶಿಷ್ಟ ಕುಲಬಾಂಧವರ ಒಕ್ಕೂಟದ ಕಾರ್ಯಾಧ್ಯಕ್ಷ ಗೋವಿಂದ ಬೆಲ್ಡೋಣಿ, ರಂಗನಾಯಕ ತಪೇಲ, ಪ್ರಕಾಶ ಹುಬ್ಬಳ್ಳಿ, ಸುರೇಶ ಸೌದುಲ್, ರಾಜೇಶ ಮಂತ್ರಗಾರ, ವೆಂಕಟೇಶ ಭೂಮಪಲ್ಲಿ, ಸೀತಾರಾಮ ಹರಿಜನ, ಕುಲ್ಲಾಯಪ್ಪ ಮಂತ್ರಿ, ಹರೀಶ ಅನಂತಪುರ, ಅನಿಲ ಆತ್ಮಕೂರ, ಓಬಳೇಶ ಪಾಮಡಿ, ಲಕ್ಷ್ಮಿ ಹರಿಜನ, ಮೈತ್ರ ಸೌದುಲ್, ಪಕ್ಕೀರಮ್ಮ ಭಂಡಾರಿ ಮುಂತಾದವರು ಭಾಗವಹಿಸಿದ್ದರು.