

ಬೆಂಗಳೂರು: ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಲ್ಲೇಶ್ವರದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿ ಬಿಸಿ ಮುಟ್ಟಿಸಿದ್ದಾರೆ.
ಕಂದಾಯ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ವಸೂಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಪಾಲಿಕೆ, ಬುಧವಾರ ಸಂಜೆ ಮಂತ್ರಿ ಮಾಲ್‌ಗೆ ಆಗಮಿಸಿ ಅಲ್ಲಿದ್ದ ಗ್ರಾಹಕರನ್ನು ಹೊರಕಳುಹಿಸಿ ಬೀಗ ಹಾಕಿದರು. ಜತೆಗೆ ಐನಾಕ್ಸ್ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದವರನ್ನು ಶೋ ಮುಗಿದ ಬಳಿಕ ಹೊರಕಳುಹಿಸಿ ಮುಖ್ಯ ಗೇಟ್ ಬೀಗ ಹಾಕಿ ಮೊಹರು ಮಾಡಿ ಅಧಿಕಾರಿಗಳು ಹೊರನಡೆದರು.
ಎರಡು ವರ್ಷದ ಹಿಂದೆಯೂ ತೆರಿಗೆ ಬಾಕಿ ಪಾವತಿಸಲು ವಿಲವಾಗಿದ್ದ ಮಾಲ್‌ಗೆ ಪಾಲಿಕೆ ಬೀಗ ಹಾಕಿತ್ತು. ಆ ಸಂದರ್ಭದಲ್ಲಿ ಕಂತುಗಳಲ್ಲಿ ಹಣ ಪಾವತಿಸುವ ಭರವಸೆ ನೀಡಿ ಮಾಲ್ ಕಾರ್ಯಾಚರಣೆಗೆ ಒಪ್ಪಿಗೆ ಪಡೆದಿತ್ತು. ಇದೀಗ ಮತ್ತದೇ ಚಾಳಿ ಮುಂದುವರಿಸಿರುವ ಮಾಲ್ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿ ಬೀಗ ಹಾಕಲಾಯಿತು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
51 ಕೋಟಿ ರೂ. ಬಾಕಿ:
ಮಂತ್ರಿ ಮಾಲ್ 2018-19ರಿಂದ ಆಸ್ತಿತೆರಿಗೆ ಪಾವತಿಸಿಲ್ಲ. ಕಳೆದ ೆಬ್ರವರಿ ವೇಳೆಗೆ ಈ ಮೊತ್ತ 42.69 ಕೋಟಿ ರೂ.ಗೆ ಏರಿತ್ತು. ಆ ಸಂದರ್ಭದಲ್ಲಿ ಪಾಲಿಕೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಇದಕ್ಕೂ ಮಾಲ್ ವ್ಯವಸ್ಥಾಪಕರು ಜಗ್ಗಿರಲಿಲ್ಲ. ಈಗ ಒಟ್ಟು ಮೊತ್ತ 51 ಕೋಟಿ ರೂ.ಗೆ ಏರಿದೆ. ಮಾಲ್‌ಗೆ ಬೀಗ ಹಾಕಿರುವ ಮಾಹಿತಿಯನ್ನು ಅಧಿಕಾರಿಗಳು ಗುರುವಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕಿರುವ ಕಾರಣ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಲು ನಿರಾಕರಿಸಿದ್ದಾರೆ.
ಸದ್ಯ ಪಾಲಿಕೆಗೆ ಆದಾಯ ಕೊರತೆ ಉಂಟಾಗಿರುವ ಕಾರಣ ವಿವಿಧ ಸಂಪನ್ಮೂಲಗಳಿಂದ ಹಣ ಕ್ರೊಡೀಕರಣಕ್ಕೆ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಿ ತೆರಿಗೆ ಬಾಕಿ ವಸೂಲು ಮಾಡಲಾಗುತ್ತಿದೆ. ಇತ್ತೀಚಿಗೆ ಮಧ್ಯಮ ಪ್ರಮಾಣದ ವಾಣಿಜ್ಯ ಮಳಿಗೆಗಳು ಸೇರಿ 800ಕ್ಕೂ ಹೆಚ್ಚು ಅಂಗಡಿ, ಮುಂಗಟ್ಟು, ಮಾಲ್‌ಗಳಿಗೆ ಬೀಗ ಹಾಕಲಾಗಿದೆ.