ಮಂತ್ರಿ ಗ್ರೂಪ್​ನ ಎಂಡಿ ಸುಶೀಲ್​ ಬಂಧನ: ಇಂದು ಬೆಳ್ಳಂಬೆಳಗ್ಗೆ ಕಚೇರಿಗಳ ಮೇಲೆ ಇಡಿ ದಾಳಿ

mantri gruop md susheel
Published on

ಬೆಂಗಳೂರು: ದಕ್ಷಿಣ ಭಾರತದ ದೊಡ್ಡ ರಿಯಲ್​ಎಸ್ಟೇಟ್​ ಕಂಪನಿಗಳಲ್ಲಿ ಒಂದಾಗಿರುವ ಮಂತ್ರಿ ಡೆವಲಪರ್ಸ್​ನ ಸಿಇಒ ಮತ್ತು ಎಂಡಿ ಸುಶೀಲ್​ ಪಾಂಡುರಂಗ ಮಂತ್ರಿ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು(ಸೋಮವಾರ) ಬೆಳ್ಳಂಬೆಳಗ್ಗೆ ಸುಶೀಲ್​ಗೆ ಸಂಬಂಧಿಸಿದ ಕಚೇರಿಗಳ ಮೇಲೆ 10ಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸುಶೀಲ್​ ಅವರಿಗೆ ಇಡಿ ಸಮನ್ಸ್​ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ಸುಶೀಲ್​ ಅವರನ್ನು ಶುಕ್ರವಾರ(ಜೂ.24) ಬಂಧಿಸಿದ್ದ ಅಧಿಕಾರಿಗಳು ಶನಿವಾರ ಕೋರ್ಟ್​ಗೆ ಹಾಜರುಪಡಿಸಿದ್ದರು. ಕೋರ್ಟ್​ ಸುಶೀಲ್​ ಅವರನ್ನು 10 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿತ್ತು. ಇದೀಗ ಇಡಿ ಅಧಿಕಾರಿಗಳು ಸುಶೀಲ್​ರ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸಾವಿರಾರು ಗ್ರಾಹಕರಿಗೆ ಫ್ಲ್ಯಾಟ್​ ನೀಡುವ ಭರವಸೆ ನೀಡಿ ಕೋಟ್ಯಂತರ ರೂ. ಪಡೆದು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪ ಸುಶೀಲ್​ ಮೇಲಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್​ 19 ರ ಅಡಿ (ಪಿಎಂಎಲ್​ಎ) ಕಸ್ಟಡಿಗೆ ತೆಗೆದುಕೊಂಡಿರುವ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 2020ರ ಮಾ. 22ರಂದು ಎಫ್​​ಐಆರ್​ ದಾಖಲು ಮಾಡಿದ್ದ ಇಡಿ ತನಿಖೆ ಪ್ರಾರಂಭಿಸಿತ್ತು. ಸುಶೀಲ್​ ಅವರಲ್ಲದೆ ಕಂಪನಿ, ನಿರ್ದೇಶಕರು ಹಾಗೂ ಹಲವು ಉದ್ಯೋಗಿಗಳ ಮೇಲೆ ಎಫ್​​ಐಆರ್​ ದಾಖಲಾಗಿದೆ.

ವಿವಿಧ ಹಣಕಾಸು ಸಂಸ್ಥೆಗಳಿಂದ 5 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಪೈಕಿ 1 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಕೆಲ ಸಾಲಗಳು ಸುಸ್ತಿಯಾಗಿವೆ. ಒಂದೇ ಪ್ರಾಜೆಕ್ಟ್​ ಸಂಬಂಧ ವಿವಿಧ ಸಂಸ್ಥೆಗಳಿಂದ ಕಂಪನಿ ಸ್ವತ್ತುಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿದ್ದಾರೆ. ಹೀಗಾಗಿ ವಿಚಾರಣೆಗೆ ಬರಲು ಸಮನ್ಸ್​ ಜಾರಿ ಮಾಡಲಾಗಿತ್ತು. ಆದರೆ, ವಿಚಾರಣೆಗೆ ಗೈರುಹಾಜರಾಗಿದ್ದಲ್ಲದೆ ಮಹತ್ವದ ಮಾಹಿತಿ ಮುಚ್ಚಿಡುತ್ತಿದ್ದರು. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೂಡ ಸರಿಯಾಗಿ ಸಲ್ಲಿಸಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಕಳೆದ ವರ್ಷ ಐಟಿ ದಾಳಿ: ಸಾವಿರಾರು ಜನರಿಂದ ಹಣ ಪಡೆದು ಫ್ಲ್ಯಾಟ್​ ಕೊಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕರು ಇ.ಡಿ.ಗೂ ದೂರು ನೀಡಿದ್ದರು. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್​ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಬಹುತೇಕ ವ್ಯವಹಾರಗಳು ನಗದು ರೂಪದಲ್ಲಿ ನಡೆದಿರುವುದು ಪತ್ತೆಯಾಗಿತ್ತು. ಐಟಿ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಅಲ್ಲದೆ ಹವಾಲ ರೂಪದಲ್ಲಿ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಅನುಮಾನ ಬಂದಿತ್ತು. ಆ ಹಣದ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳಿಗೆ ಸೂಕ್ತ ದಾಖಲೆ ಕೊಡುವಲ್ಲಿ ಸುಶೀಲ್​ ವಿಫಲರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net