

ರಾಯಚೂರು ಮಂತ್ರಾಲಯಕ್ಕೆ ಪ್ರವಾಸ ಆಗಮಿಸಿದ್ದ ಹಾಸನ ಮೂಲದ ಮೂವರು ವಿದ್ಯಾರ್ಥಿಗಳು ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ವೇಳೆ ಕೊಚ್ಚಿಕೊಂಡು ಹೋಗಿ ಶವವಾಗಿ ಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಹಾಸನದ ಅಜಿತ್ (19), ಸಚಿನ್ (20) ಮತ್ತು ಪ್ರಮೋದ್ (20) ಎಂದು ಗುರುತಿಸಲಾಗಿದೆ.
ಹಾಸನದಿಂದ ಇವರೂ ಸೇರಿ ಒಟ್ಟು 7 ಜನ ಸ್ನೇಹಿತರು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಿದ್ದರು.
ತುಂಗಭದ್ರಾ ನದಿಯಲ್ಲಿ ಪ್ರವಾಹ ಇದ್ದು ಯಾರೂ ನದಿಗಿಳಿಯದಂತೆ ಪೊಲೀಸರು ಹಾಗೂ ಮಠದ ಆಡಳಿತ ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇದ್ದರೂ ನದಿಗೆ ಈಜಲು ಇಳಿದಿದ್ದ ಈ ಮೂವರು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂತ್ರಾಲಯ ಪೊಲೀಸರು ಹಾಗೂ ಆಂಧ್ರದ ಎನ್‌ಡಿಆರ್‌ಎಫ್ ತಂಡದಿಂದ ನಾಪತ್ತೆಯಾದವರಿಗೆ ಶೋಧ ಕಾರ್ಯ 24 ಗಂಟೆಯ ನಂತರ ಮೂವರ ಮೃತ ದೇಹಗಳು ಪತ್ತೆಯಾಗಿವೆ.
ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.