ಮಂತ್ರ ಮಾಂಗಲ್ಯ ಮದುವೆಯಾದ ರಂಜಿತಾ, ಪ್ರದೀಪ್

mysore
Published on

ಮೈಸೂರು: ಜಾತ್ಯತೀತ ಒಲವಿನ ವಿವಾಹ ವೇದಿಕೆಯಾದ ಮಾನವ ಮಂಟಪ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಶಿವರುದ್ರಮ್ಮ ಟ್ರಸ್ಟಿನಲ್ಲಿ ಆರ್.ರಂಜಿತಾ ಹಾಗೂ ಡಾ.ಆರ್.ಎನ್.ಪ್ರದೀಪ್ ಅವರ ಅಂತರ್ಜಾತಿ ಮದುವೆ ಭಾನುವಾರ ಸರಳವಾಗಿ ನಡೆಯಿತು.


ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯ ಒಕ್ಕಲಿಗರಾದ ಪ್ರದೀಪ್ ಹಾಗೂ ಮೈಸೂರು ತಾಲೂಕಿನ ಕಡಕೋಳದ ಕುರುಬ ಜನಾಂಗದ ರಂಜಿತಾ ಅವರು ಅಜೀಂ ಪ್ರೇಮ್‌ಜೀ ಫೌಂಡೇಷನ್‌ನ ಯೋಜನೆಯೊಂದರ ಸಂಪನ್ಮೂಲ ವ್ಯಕ್ತಿಗಳಾಗಿ ಕೊಳ್ಳೇಗಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾನವ ಮಂಟಪ ವೇದಿಕೆಯ ಡಾ.ಕಾಳಚನ್ನೇಗೌಡ ಅವರು ವಿವಾಹ ಪ್ರಮಾಣ ವಚನ ಬೋಧಿಸಿದರು.

ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಈ.ಧನಂಜಯ್ ಎಲಿಯೂರು ಓದಿದರು. ಅಜೀಂ ಪ್ರೇಮ್‌ಜೀ ಫೌಂಡೇಷನ್ ಪ್ರಾಧ್ಯಾಪಕ ಉಮಾಶಂಕರ್ ಪೆರಿಯೂರು ಮಾತನಾಡಿ, ಪ್ರೀತಿಸುವುದರ ಜತೆಗೆ ಮದುವೆ ಆಗುವವರೆಗೆ ಸಂಯಮ, ತಿಳಿವಳಿಕೆ, ಪರಸ್ಪರ ವಿಶ್ವಾಸ ಬೇಕು. ಜೀವನಪಯರ್ಂತ ಒಟ್ಟಿಗೆ ಬದುಕುತ್ತೇವೆಂಬ ನಂಬಿಕೆ ಇರಬೇಕು ಎಂದು ಕಿವಿಮಾತು ಹೇಳಿದರು.


ವಿಶ್ರಾಂತ ಪ್ರಾಧ್ಯಾಪಕಿ ಡಾ.ವನಜಾ ಕಾಳಚನ್ನೇಗೌಡ ಮಾತನಾಡಿ, ಪ್ರೀತಿಸಿದವರನ್ನೆಲ್ಲ ಮದುವೆಯಾಗಲು ಆಗುವುದಿಲ್ಲ. ಮದುವೆಯಾದ ಮೇಲೆ ಪ್ರೀತಿ ಉಳಿಯಬೇಕು, ಗಟ್ಟಿಯಾಗಬೇಕು ಎಂದರು.


ಲೇಖಕ ಡಾ.ಕಾಳೇಗೌಡ ನಾಗವಾರ ಮಾತನಾಡಿ, ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಆರೋಗ್ಯ ಕಡೆ ಗಮನಹರಿಸಬೇಕು, ಶೌಚಗೃಹಗಳನ್ನು ಕಟ್ಟಿಸಿಕೊಳ್ಳಬೇಕು. ಆದರೆ, ಸಾಲ ಮಾಡಿ ಮದುವೆ, ತಿಥಿ ಮಾಡುತ್ತಾರೆ. ಇದಕ್ಕಾಗಿ ಸರಳ ಮದುವೆಗಳು ಹೆಚ್ಚಬೇಕು ಎಂದು ಸಲಹೆ ನೀಡಿದರು.


ನವವಿವಾಹಿತ ಡಾ.ಪ್ರದೀಪ್ ಮಾತನಾಡಿ, ಸರಳವಾಗಿ ಮದುವೆಯಾಗಬೇಕೆಂದು ತೀರ್ಮಾನಿಸಿದ್ದೆ. ಬೆಂಗಳೂರಿನ ಅಬ್ದುಲ್ ವಾಜೀರ್ ಅವರ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತ ಎಂ.ಎ ಓದಿದೆ. ನಂತರ ಕಲಬುರ್ಗಿಯ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದೆ. ಈಗ ನಮ್ಮ ಸಂಬಳದಲ್ಲಿ ಶೇ.10ರಷ್ಟನ್ನು ಬಡಮಕ್ಕಳ ಓದಿಗೆ ತೆಗೆದಿಡುವೆ. ಪತ್ನಿ ರಂಜಿತಾ ಕೂಡ ಸರ್ಕಾರಿ ಶಾಲೆಗಳಿಗೆ ನೆರವಾಗುತ್ತಾಳೆ ಎಂದರು.


ಇದೇ ಸಂದರ್ಭದಲ್ಲಿ ಡಾ.ಪ್ರದೀಪ್ ಅವರ ‘ಲಿಯೋ ಟಾಲ್ ಸ್ಟಾಯ್ ಸಾಹಿತ್ಯದ ನೆಲೆಗಳು’ ಕೃತಿ ಬಿಡುಗಡೆಯಾಯಿತು. ಉಗ್ರನರಸಿಂಹೇಗೌಡ, ಡಾ.ಲತಾ ಮೈಸೂರು, ಡಾ.ಹರೀಶಕುಮಾರ್, ಸತೀಶ್ ಜವರೇಗೌಡ ಹಾಜರಿದ್ದರು. ಪ್ರತಾಪ್, ಅಶ್ವಿನಿ ಹಾಗೂ ಅವಿನಾಶ್ ಮದುವೆ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net