

ಕೂಡಿಗೆ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಗಡಿಭಾಗ ಶಿರಂಗಾಲ ಗ್ರಾಮದಲ್ಲಿ ಗ್ರಾಮದೇವತೆ ಶ್ರಿ ಮಂಟಿಗಮ್ಮ ದೇವಿಯ ವಾರ್ಷಿಕ ಹಬ್ಬದ ಉತ್ಸವ ಹಾಗೂ ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಗ್ರಾಮದ ಕೋಟೆಯ ಗದ್ದಿಗೆಯಿಂದ ಆರಂಭಗೊಂಡ ದೇವಿಯ ಮೆರವಣಿಗೆ ಮತ್ತು ಉತ್ಸವ ಪವಿತ್ರ ಬನವನ್ನು ತಲುಪಿತು. ದೇವಿಯ ಬನದಲ್ಲಿ ಹಾಕಿದ್ದ ಅಗ್ನಿಕುಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆದರು.
ಗ್ರಾಮದ ಮಂಟಿಗಮ್ಮ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗಿನಿಂದಲೇ ಆರಂಭಗೊಂಡ ಮಂಟಿಗಮ್ಮ ದೇವಿಯ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದರು. ಮಂಟಿಗಮ್ಮ ದೇವಸ್ಥಾನದಲ್ಲಿ ಶನಿವಾರ ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಜಾತ್ರೆಯು ಜನರ ಗಮನ ಸೆಳೆಯಿತು.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರಿ ಮಂಟಿಗಮ್ಮ ದೇವಿಯ ಹಬ್ಬ ಮತ್ತು ಉತ್ಸವ ಗ್ರಾಮೀಣ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ದೇವಿಯ ಉತ್ಸವದಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಗ್ರಾಮ ದೇವತೆ ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಮದ್ದುಗುಂಡುಗಳ ಪ್ರದರ್ಶನ: ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ಗ್ರಾಮದ ಸಂತೆಮಾಳ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುದುಗಳ ಚಿತ್ತಾರ ಕಣ್ಮನ ಸೆಳೆದವು. ಗ್ರಾಮ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎಸ್.ಜೆ.ಉಮೇಶ್, ಕಾರ್ಯದರ್ಶಿ ಎಂ.ಎಸ್.ಗಣೇಶ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಉಪ ಸಮಿತಿಗಳ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಅಚ್ಚುಕಟ್ಟಾಗಿ ನಡೆದವು.
ಶಿರಂಗಾಲ ಗ್ರಾಮದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ಮಂಟಿಗಮ್ಮ ದೇವರ ಹಬ್ಬ ಹಾಗೂ ಜಾತ್ರೋತ್ಸವ ಗ್ರಾಮದ ಜನರಲ್ಲಿ ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ಸೌಹಾರ್ದತೆ ಹಾಗೂ ಭಾವೈಕ್ಯತೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.
ನಾಳೆ ವಾರ್ಷಿಕ ರಥೋತ್ಸವ: ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.೧೭ ರಂದು ಸೋಮವಾರ ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಉಮಾಮಹೇಶ್ವರ ವಾರ್ಷಿಕ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.