ಶ್ರೀರಾಮನ ಕಣ್ತುಂಬಿಕೊಳ್ಳುವುದೇ ಭಾಗ್ಯ: ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಹೇಳಿಕೆ

Manthraksathe Distribution Mandya
Published on

ಮಂಡ್ಯ: ಅಯೋಧ್ಯೆ ಪುಣ್ಯಕ್ಷೇತ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಶ್ರೀರಾಮನನನ್ನು ಕಣ್ತುಂಬಿಕೊಳ್ಳುವುದೇ ನಮ್ಮ ಭಾಗ್ಯ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ, ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಹೇಳಿದರು.

ನಗರದ ವ್ಯಾಸರಾಜ ಮಠದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಅಭಿಯಾನದಲ್ಲಿ ಪೂಜಿಸಿ ತಂದ ಪವಿತ್ರ ಮಂತ್ರಾಕ್ಷತೆಯನ್ನು ವಿತರಿಸಿ ಮಾತನಾಡಿದರು.

ಕಿಷ್ಕಿಂಧೆಯಲ್ಲಿ ಆಂಜನೇಯನ ಜನ್ಮಭೂಮಿಯಾಗಿದೆ. ನಮ್ಮ ಕರ್ನಾಟಕದಿಂದಲೇ ಕಲ್ಲುಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಸಾವಿರಾರು ಕರಸೇವಕರು ಎರಡು ವರ್ಷದಿಂದ ಮನೆಮಠ ಬಿಟ್ಟು ಸೇವೆ ಮಾಡುತ್ತಿದ್ದಾರೆ. ಮಂದಿರದ ಭೂಸ್ಥಳ ಮತ್ತು ಮೇಲ್ಭಾಗ ಸಂಪೂರ್ಣವಾಗಿದೆ. ಇನ್ನೂ ಸಹ ಒಂದೂವರೆ ವರ್ಷದಲ್ಲಿ ಕೆಲಸ ಪೂರ್ಣಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ರಾಜಸ್ಥಾನದಿಂದ ಬಂದ ಕಲ್ಲುಗಳನ್ನು ಕೆತ್ತನೆ ಮಾಡುವುದರಲ್ಲಿ ನಮ್ಮ ರಾಜ್ಯದವರು ಸೇವೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಅಯೋಧ್ಯೆಯು ಒಂದು ಪುಣ್ಯಸ್ಥಳವಾಗುವುದರಲ್ಲಿ ಅನುಮಾನವೇ ಇಲ್ಲ. ಅಮೃತಶಿಲೆಯಲ್ಲಿ ಬಾಲರಾಮನ ನಾಲ್ಕೂವರೆ ಅಡಿಯ ವಿಗ್ರಹದಲ್ಲಿ ಶ್ರೀರಾಮಚಂದ್ರನ ಬಾಲವಿಗ್ರಹವಿದೆ. ರಾಮನ ಜನ್ಮಸ್ಥಳದಲ್ಲಿಯೇ ಶ್ರೀರಾಮನ ಪ್ರತಿಷ್ಠಾಪಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಮೂರು ದಿನ ಅಲ್ಲೇ ಇದ್ದೆವು. ಮುಂದೆ ನಡೆಯುವ ವಿಶ್ವ ಹಿಂದು ಪರಿಷತ್‌ನಿಂದ ಕರಸೇವಕಪುರದಲ್ಲಿ ಮಹಾಮೃತ್ಯುಂಜಯ ವಿಶೇಷ ಯಾಗವನ್ನು ಮಾಡಿದ್ದೇವೆ. ರಾಮನ ಮೂಲ ಸ್ಥಾನದಲ್ಲಿ ಆರತಿ ಮಾಡುವ ಮೂಲಕ ಭಜನೆಗಳನ್ನು ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು ಎಂದರು.

ಆದಿಚುಂಚನಗಿರಿಯ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಅಯೋಧ್ಯೆಯು ಕಾಶಿಯಷ್ಟೇ ಶುಭ ತರುವ ಸ್ಥಾನವಾಗಲಿದೆ. ಕಾಶಿಯಷ್ಟೇ ಮೋಕ್ಷ ಸಿಗುತ್ತದೆ ಎಂಬುವುದು ಇಲ್ಲಿ ಮುಖ್ಯವಾಗಿದೆ. ಶ್ರೀರಾಮನ ಪ್ರತಿಷ್ಠಾಪನೆಯಿಂದ ವಿಶ್ವಕ್ಕೆ ಒಳಿತಾಗಲಿದೆ. ಈ ಪುಣ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಪುನೀತರಾಗೋಣ ಎಂದು ಹೇಳಿದರು.

ಜಿಲ್ಲಾ ಸಹ ಸಂಚಾಲಕರಾದ ಪ್ರೊ.ಪ್ರಕಾಶ್, ಸುರೇಶ್, ವಿಶ್ವ ಹಿಂದು ಪರಿಷತ್‌ನ ಜಗನ್ನಾಥಶಾಸ್ತ್ರಿ, ಎಬಿವಿಪಿಯ ದೊಡ್ಡಾಚಾರ್, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಇದ್ದರು. ಇದೇ ವೇಳೆ ಅಯೋಧ್ಯೆಯಿಂದ ಪೂಜಿಸಿ ತಂದ ಪವಿತ್ರ ಮಂತ್ರಾಕ್ಷತೆಯನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net