

ಮಡಿಕೇರಿ:
ಬಹಳ ಹುರುಪಿನಿಂದ ಪ್ರಚಾರ ನಡೆಸುತ್ತಿರುವ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಉತ್ಸಾಹಕ್ಕೆ ಸ್ವಪಕ್ಷದ ಹಿರಿಯರೇ ಅಡ್ಡಿಯಾದಂತಿದೆ. ನಾವೆಲ್ಲಾ ಒಂದೇ ಎನ್ನುವಂತೆ ಮೇಲ್ನೋಟಕ್ಕೆ ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿದ್ದರೂ ನೈಜ ಸ್ಥಿತಿ ತದ್ವಿರುದ್ಧವಾಗಿದೆ ಎನ್ನುವುದನ್ನು ಕೆಲವು ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ದಿನದ ಕೆಲವು ಬೆಳವಣಿಗೆಗಳು ಕೂಡ ಮಂಥರ್ ಗೌಡ ದಾರಿಗೆ ಪ್ರತಿಕೂಲವಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.
ಬಿಜೆಪಿ ಗೆಲುವಿನ ಕುದುರೆಯ ನಾಗಲೋಟಕ್ಕೆ ಕಡಿವಾಣ ಹಾಕಲು ಸಮರ್ಥ ವ್ಯಕ್ತಿ ಎನ್ನುವ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿ ಇರುವ ಡಾ. ಮಂಥರ್ ಗೌಡ ಅವರ ಕಾಲೆಳೆಯಲು ಪಕ್ಷದೊಳಗೆಯೇ ವೇದಿಕೆ ಸಜ್ಜಾಗಿರುವ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. ಹೈಕಮಾಂಡ್ ಆಯ್ಕೆ ಮಾಡಿರುವ ವ್ಯಕ್ತಿ ಎನ್ನುವ ಕಾರಣಕ್ಕೆ ಬಹಳಷ್ಟು ನಾಯಕರು ತೋರಿಕೆಗೆ ಜೊತೆಯಲ್ಲಿದ್ದಂತೆ ಕಂಡುಬಂದರೂ ಆಂತರಿಕವಾಗಿ ಮಾಡಬೇಕಾದ ಕೆಲಸಗಳನ್ನು ಸದ್ದಿಲ್ಲದೆ ಮಾಡಿ ಮುಗಿಸುತ್ತಿದ್ದಾರೆ. ಕೆಲವು ನಾಯಕರನ್ನು ಅನೌಪಚಾರಿಕವಾಗಿ ಮಾತಿಗೆಳೆದಾಗ ಇಂತಹ ಬಹಳಷ್ಟು ತೆರೆಮರೆಯ ಕಸರತ್ತುಗಳು ಬಯಲಿಗೆ ಬರುತ್ತಿದೆ.
ಮಡಿಕೇರಿ ಕ್ಷೇತ್ರದ ಪಕ್ಷದೊಳಗಿನ ತಳಮಳ ಡಾ. ಮಂಥರ್ ಗೌಡ ನಾಮಪತ್ರ ಸಲ್ಲಿಕೆ ನಂತರ ಜಾಸ್ತಿಯೇ ಆಗುತ್ತಿದೆ. ತಳಮಟ್ಟದಲ್ಲಿ ಕೆಲಸ ಮಾಡಿ ಮತದಾರರಲ್ಲಿ ವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಸ್ಥಳೀಯ ಮುಖಂಡರು ಕೆಲವು ಕಡೆ ಅಸಹಕಾರ ತೋರಿಸುತ್ತಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಬೇಕಿರುವ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಇವರನ್ನು ಮುನ್ನಡೆಸುವ ಹಿರಿಯ ನಾಯಕರು ಮಧ್ಯೆ ತಾಳ ಮೇಳ ತಪ್ಪಿದಂತಿದ್ದು ಕೆಲವು ಕಡೆ ಕಾಂಗ್ರೆಸ್ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.
ಡಾ. ಮಂಥರ್ ಗೌಡ ಅವರ ಇತ್ತೀಚಿನ ವರ್ತನೆಯೂ ಅವರಿಗೆ ಮುಳುವಾಗಬಹುದ ಎನ್ನುತ್ತಾರೆ ನಿಕಟವರ್ತಿಗಳು. ಈ ಮೊದಲೆಲ್ಲಾ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಯಾವುದೇ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಇಷ್ಟದಂತೆ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಬೇರೆ ಕಡೆಯಲ್ಲಿ ಚುನಾವಣೆ ಎದುರಿಸುವುದಕ್ಕೂ ಕೊಡಗಿನಲ್ಲಿ ಚುನಾವಣೆ ಎದುರಿಸುವುದಕ್ಕೂ ವ್ಯತ್ಯಾಸಗಳಿದೆ. ಇಲ್ಲಿಯ ಮತದಾರರು ಪ್ರಜ್ಞಾವಂತರಿದ್ದು ಅವರ ಜೊತೆ ವ್ಯವಹರಿಸಲು ಸ್ಥಳೀಯವಾಗಿ ಬೇರೆಯದ್ದೇ ಆದ ಕಾರ್ಯತಂತ್ರಗಳಿದೆ. ಆ ಪ್ರಕಾರ ನಡೆದುಕೊಂಡರೆ ಮಾತ್ರ ಅಂದುಕೊಂಡಿದ್ದು ಸಾಧಿಸಲು ಸಾಧ್ಯ ಎನ್ನುವುದು ಅಭಿಪ್ರಾಯ.
ಪ್ರಚಾರ ಸಭೆಗಳು, ಮತದಾರರ ಭೇಟಿ ಕಾರ್ಯಕ್ರಮ, ನಾಯಕರ ಜೊತೆ ಚರ್ಚೆ ಮತ್ತಿತರ ವಿಷಯಗಳ ಬಗ್ಗೆ ಸ್ಥಳೀಯ ನಾಯಕರನ್ನು ಡಾ. ಮಂಥರ್ ಗೌಡ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಸುತ್ತಲಿನ ಒಂದಿಷ್ಟು ಹೊಗಳುಭಟರ ಪಡೆ ಹೇಳಿದಂತೆ ನಡೆದುಕೊಳ್ಳುತ್ತಿರುವುದು ಸ್ಥಳೀಯ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿಯೇ ಆರಂಭದ ದಿನಗಳಲ್ಲಿ ಮಂಥರ್ ಗೌಡ ಜೊತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಬಹುತೇಕ ನಾಯಕರು ಈಗ ದೂರ ಉಳಿದಿದ್ದಾರೆ. ಪ್ರಚಾರದ ವಿಷಯದಲ್ಲೂ ತಟಸ್ಥವಾಗಿದ್ದಾರೆ. ಇದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಾಲಿಗೆ ಮುಂದೆ ದುಬಾರಿಯಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.
ಮಾಜಿ ಸಚಿವ ಬಿ.ಎ. ಜೀವಿಜಯ ತಟಸ್ಥರಾಗಿರುವುದು ಕೂಡ ಡಾ. ಮಂಥರ್ ಗೌಡ ಅವರಿಗೆ ಪ್ರತಿಕೂಲವಾಗಿದೆ. ಹೊರ ಜಿಲ್ಲೆಯ ವ್ಯಕ್ತಿಗೆ ಟಿಕೆಟ್ ಕೊಡಬಾರದು ಎಂದು ಹೈಕಮಾಂಡ್‌ಗೆ ಸಲಹೆ ನೀಡಿದ್ದ ಜೀವಿಜಯ ಈಗ ಮಂಥರ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದ ನಂತರ ಒಬ್ಬ ಕಿರಿಯನ ಎದುರು ತನಗೆ ಅವಮಾನ ಆಯಿತು ಎನ್ನುವ ನೋವಿನಲ್ಲಿ ಇರುವಂತಿದೆ. ತಮ್ಮ ಆಪ್ತರ ಬಳಿಯೂ ಈ ವಿಷಯ ಹೇಳಿಕೊಂಡಿದ್ದಾರೆ. ಮಂಥರ್ ಗೌಡ ಜೊತೆ ಪ್ರಚಾರದಲ್ಲಿ ಗುರುತಿಸಿಕೊಂಡರೆ ತಮ್ಮ ನಾಯಕನಿಗೆ ಬೇಸರ ಆಗಬಹುದು ಎನ್ನುವ ಕಾರಣಕ್ಕೆ ಜೀವಿಜಯ ಆಪ್ತ ಕಾಂಗ್ರೆಸಿಗರು ಮಂಥರ್ ಗೌಡ ಬಳಿಗೆ ಸುಳಿಯುತ್ತಲೇ ಇಲ್ಲ. ಜೀವಿಜಯ ಮನವೊಲಿಸಲು ಸ್ವತಃ ಮಂಥರ್ ಗೌಡ ಸೇರಿದಂತೆ ಹಲವು ನಾಯಕರು ಪ್ರಯತ್ನಿಸಿದರೂ ಪ್ರಯೋಜನ ಆಗಿಲ್ಲ.
ಕೊಡಗಿನಲ್ಲಿ ಚುನಾವಣೆಯಲ್ಲಿ ಈ ತನಕ ಜಾತಿ ಪ್ರಮುಖವಾಗಿರಲಿಲ್ಲ. ಆದರೆ ಡಾ. ಮಂಥರ್ ಗೌಡ ಒಂದು ಜಾತಿಯವರು ಹೆಚ್ಚು ಇರುವ ಭಾಗಗಳತ್ತಲೇ ಗಮನ ಕೇಂದ್ರೀಕರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಆರೋಪಿಸುತ್ತಿದ್ದಾರೆ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎಲ್ಲಾ ಜಾತಿಯವರಿದ್ದಾರೆ. ಎಲ್ಲಾ ಜಾತಿ, ಧರ್ಮಕ್ಕೂ ಸಮಾನ ಅವಕಾಶ ಕೊಡುತ್ತಾ ಬರಲಾಗುತ್ತಿದೆ. ಆದರೆ ಪ್ರಚಾರದ ವೇಳೆ ಒಂದು ಜಾತಿ ಕಡೆಗೆ ಮಾತ್ರ ಹೆಚ್ಚು ಗಮನ ಹರಿಸುವುದು ತಪ್ಪು ಸಂದೇಶ ಕಳಿಸಿದಂತಾಗುತ್ತದೆ ಎನ್ನುವ ಆತಂಕ ಹಿರಿಯ ಮುಖಂಡರದ್ದು.