ಮಡಿಕೇರಿಗೆ ಮಂಥರ್ ಗೌಡ ಕಾಂಗ್ರೆಸ್ ಅಭ್ಯರ್ಥಿ

06mdk01 Manthar Gowda
Published on

ಮಡಿಕೇರಿ:

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಕೊನೆಗೂ ಅಂತಿಮವಾಗಿದೆ. ಕೊಡಗಿನಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ತೀವ್ರ ಸ್ಪರ್ಧೆ ನೀಡಿದ್ದ ಡಾ. ಮಂಥರ್ ಗೌಡ ಈಗ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ. ಈ ಮೂಲಕ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೂ ಕಾಂಗ್ರೆಸ್‌ನಿಂದ ಹುರಿಯಾಳುಗಳು ಚುನಾವಣಾ ಕಣಕ್ಕೆ ಇಳಿದಂತಾಗಿದೆ.

ಮಡಿಕೇರಿ ಕ್ಷೇತ್ರದಿಂದ ೬ ಮಂದಿ ಘಟಾನುಘಟಿಗಳು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಮಾಜಿ ಸಚಿವ ಬಿ.ಎ. ಜೀವಿಜಯ, ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಸಮಾಜ ಸೇವಕ ಹರಪಳ್ಳಿ ರವೀಂದ್ರ, ಯುವ ಮುಖಂಡ ಡಾ. ಮಂಥರ್ ಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ ಕುಮಾರ್ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುವ ತೀವ್ರ ಆಕಾಂಕ್ಷೆ ಹೊಂದಿದ್ದರು. ಹಾಗಾಗಿಯೇ ಸೂಕ್ತ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟ ಆಗಿರಲಿಲ್ಲ.

ಟಿಕೆಟ್‌ಗಾಗಿ ಡಾ. ಮಂಥರ್ ಗೌಡ ಜೊತೆ ಇನ್ನೂ ಮೂವರು ಪ್ರಭಾವಿಗಳು ತೀವ್ರ ಪೈಪೋಟಿಗೆ ಇಳಿದ್ದರು. ಇದರಿಂದಾಗಿ ಕೊನೆಯ ಕ್ಷಣದ ತನಕವೂ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ತೀವ್ರ ಕುತೂಹಲ ಮೂಡಿಸಿತ್ತು. ಗುರುವಾರ ಡಾ. ಮಂಥರ್ ಗೌಡ ಹೆಸರು ಪ್ರಕಟಿಸುವ ಮೂಲಕ ಹೈಕಮಾಂಡ್ ಎಲ್ಲಾ ಕುತೂಹಲಗಳಿಗೂ ತೆರೆ ಎಳೆದಿದ್ದು. ಕಾರ್ಯಕರ್ತರ ಗೊಂದಲಕ್ಕೂ ಮುಕ್ತಿ ಹಾಡಿದೆ.

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ಸಿಕ್ಕಿದರೂ ಬಂಡಾಯ ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಪ್ರತಿಪಕ್ಷಗಳ ನಾಯಕರೂ ಇದನ್ನೇ ಹೇಳಿಕೊಂಡು ತಿರುಗಾಡುತ್ತಿದ್ದರು. ಆದರೆ ಈಗ ಅಂತಹ ಯಾವುದೇ ವಾತಾವರಣ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಒಳಗೊಳಗೆಯೇ ಅಸಮಾಧಾನ ಇದ್ದಂತಿದ್ದರೂ ಟಿಕೆಟ್ ವಂಚಿತ ಆಕಾಂಕ್ಷಿಗಳು ಅದನ್ನು ಹೊರಗಡೆ ತೋರಿಸಿಕೊಳ್ಳುತ್ತಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ಸಂಕಲ್ಪ ತೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net