ಯರಿಯೂರಿನಲ್ಲಿ ಮಂಟೇಸ್ವಾಮಿ ಕೊಂಡೋತ್ಸವ

26 yelandur 01
ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ನಡೆದ ಮಂಟೇಸ್ವಾಮಿ ಕೊಂಡೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು.
Published on

ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಮಂಟೇಸ್ವಾಮಿ ಕೊಂಡೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು.

ಗ್ರಾಮದ ಮಾರಮ್ಮ ದೇಗುಲದ ಬಳಿ ಕೊಂಡ ಹಾಕಲಾಗಿತ್ತು. ಹೂವು, ತಳಿರು ತೋರಣಗಳಿಂದ ಅಲಂಕೃತ ಕಂಡಾಯಗಳು, ಸತ್ತಿಗೆ, ಸೂರಿಪಾನಿಗಳನ್ನು ಹೊತ್ತ ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯಲ್ಲಿ ಸಾಗಿದರು. ದಾರಿಯುದ್ದಕ್ಕೂ ಹರಕೆ ಹೊತ್ತ ಭಕ್ತರು, ಕರ್ಪೂರದ ಆರತಿ ಮಾಡಿ, ತೆಂಗಿನ ಕಾಯಿಗಳನ್ನು ಒಡೆದು ಪೂಜೆ ಸಲ್ಲಿಸಿದರು. ನೆರೆದಿದ್ದ ಸಾವಿರಾರು ಭಕ್ತರ, ಹರ್ಷೋದ್ಘಾರಗಳು, ಮಂಗಳವಾದ್ಯದೊಂದಿಗೆ ಮಂಟೇಸ್ವಾಮಿ ಕೊಂಡೋತ್ಸವ ಹಾಯುವ ದೇವರ ಕಾರ್ಯ ಜರುಗಿತು.

ನಂತರ ನೆರೆದಿದ್ದ ಭಕ್ತರು ಕೊಂಡದ ಆವರಣದಲ್ಲೇ ದೇವರ ಕುಣಿತವನ್ನು ಮಾಡುವ ಮೂಲಕ ಗಮನ ಸೆಳೆದರು. ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡ ಕೆಲವರು ನೃತ್ಯ ಮಾಡುತ್ತಿದ್ದ ದೃಶ್ಯ ಗಮನ ಸೆಳೆಯಿತು. ಹೆದ್ದಾರಿ ಬಳಿಯಲ್ಲೇ ಕೊಂಡೋತ್ಸವ ನಡೆದಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಚುನಾಯಿತ ಜನಪ್ರತಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೂಳ್ಳುವ ಮೂಲಕ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net