

ಮಳವಳ್ಳಿ : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲೇ ಗ್ರಾಮಸ್ಥರು ಸೂಕ್ತ ಸಹಕಾರ ನೀಡಿದರೆ ಜಾತ್ರಾ ಮಹೋತ್ಸವದ ಆಚರಣೆಗೆ ತಾಲೂಕು ಆಡಳಿತ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ತಹಸೀಲ್ದಾರ್ ಲೋಕೇಶ್ ತಿಳಿಸಿದರು.
ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಠದ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಧರೆಗೆ ದೊಡ್ಡವರು ಮಂಟೇಸ್ವಾಮಿ ಜಾತ್ರಾ ಮಹೋತ್ಸವ (ಏ.8)ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮದ ಯಜಮಾನರು, ಮುಖಂಡು ಮತ್ತು ಸಾರ್ವಜನಿಕರು ಹಬ್ಬದ ಆಚರಣೆ ಸಂಬಂಧ ನೀಡಿದ ಸಲಹೆ ಸೂಚನೆಗಳನ್ನು ದಾಖಲಿಸಿಕೊಳ್ಳಲಾಗಿದೆ.ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು.
ಆರೋಗ್ಯ ಇಲಾಖೆಯಿಂದ ಎರಡು ಆಂಬುಲೆನ್ಸ್, ಆರೋಗ್ಯ ಸಿಬ್ಬಂದಿ ಮತ್ತು ಅಗ್ನಿ ಶಾಮಕ ವಾಹನ ನಿಯೋಜನೆ ಮಾಡಲಾಗುವುದು. ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ, ನಿರಂತ ವಿದ್ಯುತ್ ಪೂರೈಕೆ, ಸೂಕ್ತ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ವಹಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವಚ್ಛತೆ ಪಾಲನೆಗೆ ಕ್ರಮ ವಹಿಸಬೇಕು. ಯಾವುದೇ ರೋಗ, ರುಜಿನ ಹರಡಬಾರದಂತೆ ಎಚ್ಚರಿಕೆ ವಹಿಸಬೇಕು ಎಂದರು. ಜಾತ್ರೆಯ ಸಂದರ್ಭ ಕಾನೂನು ಸುವ್ಯವಸ್ಥೆ ಪಾಲನೆಗೆ ಪೊಲೀಸರು ಸಹಕರಿಸಬೇಕೆಂದು ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್‌ಗೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಸಿದ್ದರಾಜು, ಮಂಟೇಸ್ವಾಮಿ ಮಠದ ಭರತ್ ಅರಸ್, ಮಳವಳ್ಳಿ ಮಠದ ಬಸವರಾಜು, ಉಪ ತಹಸೀಲ್ದಾರ ಕೆ.ಚಂದ್ರಶೇಖರ್, ಬೆಳಕವಾಡಿ ಪಿಎಸ್‌ಐ ಅಶೋಕ್, ಪಿಡಿಒ ಜಯಸ್ವಾಮಿ ಸೇರಿದಂತೆ ಗ್ರಾಮದ ಯಜಮಾನರು ಮತ್ತು ಮುಖಂಡರು ಇದ್ದರು.