

ಮಡಿಕೇರಿ:
ಸಿ ಆ್ಯಂಡ್ ಡಿ ಜಾಗದ ವಿಷಯದಲ್ಲಿ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲಾರೆ ಎಂದು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹೇಳಿದ್ದಾರೆ. ಮಂಗಳವಾರ ನಡೆದ ಸೋಮವಾರಪೇಟೆ ತಾಲೂಕು ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಿAದ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ರೈತರ ಪರವಾಗಿದೆ.
ಸಿ ಮತ್ತು ಡಿ ಜಾಗ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಸಮಸ್ಯೆ ಪರಿಹಾರಕ್ಕಾಗಿ ನ್ಯಾಯಯುತ ಪ್ರತಿಭಟನೆ ಖಂಡಿತವಾಗಿಯೂ ಸಾರ್ವಜನಿಕರ ಹಕ್ಕು. ಹಲವಾರು ವರ್ಷಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಆಗ ಅಧಿಕಾರದಲ್ಲಿದ್ದ ಸರ್ಕಾರಗಳು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ, ಕಂದಾಯ ಮತ್ತು ಅರಣ್ಯ ಸಚಿವರನ್ನು ಕೃಷಿಕರ ನಿಯೋಗದೊಂದಿಗೆ ಭೇಟಿಯಾಗಿ ರೈತರ ಅನೇಕ ವರ್ಷಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕಾನೂನು ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.
ರೈತರ ಹೋರಾಟಕ್ಕೆ ತಾನು ಕೂಡ ಬೆಂಬಲ ನೀಡುವೆ. ಹಾಗೆಯೇ ಸಿ ಮತ್ತು ಡಿ ಜಾಗ ಸಮಸ್ಯೆ ಸೇರಿದಂತೆ ಕೃಷಿಕ ವರ್ಗದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಲಾಗುವುದು. ಕೆಲವೊಂದು ಪ್ರಕರಣ ಕೋರ್ಟ್ನಲ್ಲಿರುವ ಕಾರಣ ಕಾನೂನಾತ್ಮಕವಾಗಿಯೇ ಈ ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಕಳೆದ ಸರ್ಕಾರಗಳು ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ.
ಆದರೆ ತಾನು ಶಾಸಕನಾದ ತರುವಾಯ ಸರ್ಕಾರದ ಮಟ್ಟದಲ್ಲಿ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದೇನೆ. ಕೃಷಿಕರ ಆತಂಕ ಗೊತ್ತಾಗುತ್ತದೆ. ಆದರೆ ಅನಗತ್ಯ ಭಯ ಬೇಡ. ಸರ್ಕಾರ ಸದಾ ಕೊಡಗಿನ ಕೃಷಿಕ ವರ್ಗದ ಜತೆಗಿದೆ. ಸಮಸ್ಯೆ ಶೀಘ್ರ ಪರಿಹಾರವಾಗಲಿದೆ ಎಂಬ ವಿಶ್ವಾಸ ತನ್ನದು ಎಂದೂ ಹೇಳಿದ್ದಾರೆ.