

ಭರತ್ ಶೆಟ್ಟಿಗಾರ್, ಮಂಗಳೂರು
ಹೊರಗೆ ಧೋ ಎಂದು ಸುರಿಯುತ್ತಿರುವ ಮಳೆ. ಮನೆಯೊಳಗೆ ಕರಿದ ತಿಂಡಿ, ಒಂದು ಕಪ್ ಬಿಸಿಬಿಸಿ ಕಾಫಿ/ಚಾ ಕುಡಿಯುತ್ತಿದ್ದರೆ ಅದರ ಮಜವೇ ಬೇರೆ ಎನ್ನುವುದು ಮುಂಗಾರು ಅವಧಿಯ ಸಾಮಾನ್ಯ ವರ್ಣನೆ. ಆದರೆ ಈ ಬಾರಿ ಮುಂಗಾರಿನ ಒಂದು ತಿಂಗಳು ಸಂದರೂ ಇನ್ನೂ ಮಳೆಯೇ ಚುರುಕು ಪಡೆದಿಲ್ಲ.
ಒಂದೆರಡು ದಿನ ಹೊರತುಪಡಿಸಿದರೆ ದಿನವಿಡೀ ಮಳೆಯೇ ಇಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಫಲ ನೀಡುತ್ತಿಲ್ಲ. ಮಳೆ ನಿರೀಕ್ಷೆ ಸಾಕಷ್ಟು ಬಾರಿ ಹುಸಿಯಾಗಿದೆ. ಬೆಳಗ್ಗೆ ಸ್ವಲ್ಪ ಮಳೆಯಾಗಿ ಆ ಮೇಲೆ ಸುಳಿವೇ ಇರುವುದಿಲ್ಲ. ಇದು ಕರಾವಳಿ, ಘಟ್ಟದ ತಪ್ಪಲು, ಮಳೆನಾಡಿನ ಸದ್ಯದ ಪರಿಸ್ಥಿತಿ.
ಮೋಡ ಕಾಣಿಸಿಕೊಂಡರೂ ಮಳೆಯಾಗದೆ, ಉರಿ ಬಿಸಿಲಿನಿಂದ ಜನರು ಕಂಗೆಡುವಂತಾಗಿದೆ. ದಿನದ ತಾಪಮಾನವೂ ಬೇಸಿಗೆ ಅವಧಿಗೆ ಸಮನಾಗಿರುತ್ತದೆ. ಮುಂಜಾನೆ ಕಾಣಿಸಿಕೊಳ್ಳುವ ಮಂಜು, ಕೊರೆಯುವ ಚಳಿ, ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಕಡೆ ಮಳೆ, ಇನ್ನೊಂದೆಡೆ ಬಿಸಿಲು, ರಾತ್ರಿ ವೇಳೆಯಲ್ಲಿ ಸುರಿಯವ ಸಾಧಾರಣ ಮಳೆ ಇದು ಈಗಿನ ಮಳೆಯ ಚಿತ್ರಣ. ಆರಂಭದ ಕೆಲವು ದಿನ ಭಾರಿ ಮಳೆಯ ಮುನ್ಸೂಚನೆ ನೀಡಿ ಮರೆಯಾಗಿದ್ದು, ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ.
ಭತ್ತ ಕೃಷಿಗೆ ಆತಂಕ: ಕಡಿಮೆ ಮಳೆ ಭತ್ತ ಕೃಷಿ ಮೇಲೆ ನೇರ ಪರಿಣಾಮ ಬೀರಿ, ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಭತ್ತಕ್ಕೆ ಆರಂಭಿಕ ಹಂತದಲ್ಲಿ ಹೆಚ್ಚು ನೀರಿನ ಅವಶ್ಯಕತೆಯಿದ್ದು, ಪ್ರತಿ ದಿನ ನೀರು ಕಟ್ಟಿ ನಿಲ್ಲಿಸಬೇಕು. ಮಳೆಯಿದ್ದರೆ ಸಮಸ್ಯೆ ಇಲ್ಲ. ಆದರೆ ಪ್ರಸ್ತುತ ಮಳೆಯಿಲ್ಲದೆ, ಎತ್ತರದ ಬೆಟ್ಟು ಗದ್ದೆಗಳಲ್ಲಿ ನಾಟಿ, ನೇಜಿ ಹಾಕಿದವರು ನೀರು ಹಾಯಿಸಲು ಪರದಾಡುವಂತಾಗಿದೆ. ಬಿಸಿಲಿನ ಹೊಡೆತಕ್ಕೆ ನೇಜಿ ಒಣಗುವ, ನೀರಿಲ್ಲದೆ ಕೀಟ ಬಾಧೆ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹೀಗೆಯೇ ಮುಂದುವರಿದರೆ ತೋಟಕ್ಕೂ ನೀರು ಬಿಡಬೇಕಾದ ಪರಿಸ್ಥಿತಿ ಬರಬಹುದು ಎನ್ನುತ್ತಿದ್ದಾರೆ ರೈತರು.
ಕಾವೇರುತ್ತಿದೆ ಸಮುದ್ರ: ಇಂದಿನ ಹವಾಮಾನ ವೈಪರೀತ್ಯಕ್ಕೆ ಜಾಗತಿಕ ತಾಪಮಾನ ಏರಿಕೆಯೂ ಕಾರಣ. ಸಮುದ್ರದ ತಾಪಮಾನವೂ ಹೆಚ್ಚುತ್ತಿದ್ದು, ಮೋಡಗಳು ಉಂಟಾದರೂ ಮಳೆಯಾಗಿ ಬದಲಾಗುತ್ತಿಲ್ಲ. ಸೂರ್ಯ ಭೂಮಿಗೆ ನೇರವಾಗಿದ್ದರೆ ಮಳೆ ಬರುವುದಿಲ್ಲ, ಮೋಡ ಮಾತ್ರ ಇರುತ್ತದೆ ಎನ್ನುವ ಉಲೇಖ ಪಂಚಾಗದಲ್ಲಿದೆ. ಅದರಂತೆ ಸದ್ಯ ಸೂರ್ಯನೂ ಭೂಮಧ್ಯದಲ್ಲಿದ್ದಾನೆ ಎಂಬ ಲೆಕ್ಕಾಚಾರವೂ ಇದೆ.
ಮುಂಗಾರಿನಲ್ಲಿ ಗುಡುಗು: ಗುಡುಗಿನೊಂದಿಗೆ ಮಳೆ ಮುಂಗಾರಿನ ಲಕ್ಷಣವಲ್ಲ. ಪೂರ್ವ ಮುಂಗಾರು ಅಥವಾ ಹಿಂಗಾರು ಮಳೆ ಸಂದರ್ಭ ಗುಡುಗಿನ ಸಹಿತ ಮಳೆ ಸುರಿಯುತ್ತದೆ. ಪ್ರಸ್ತುತ ಮೈಸೂರು, ಬೆಂಗಳೂರು ಮೊದಲಾದೆಡೆ ಗುಡುಗು ಮಿಂಚು ಸಹಿತ ಮಳೆ ಬರುತ್ತಿದೆ. ಈಗ ಗುಡುಗು ಬರುತ್ತಿದೆ ಎಂದಾದರೆ ಅರಬ್ಬಿ ಸಮುದ್ರದಿಂದ ಹೋಗುವ ಮುಂಗಾರು ಮಾರುತ ದುರ್ಬಲವಾಗಿದೆ. ಹಿಂಗಾರು ಮಾರುತಗಳು ಬಲವಾಗಿದೆ. ಎರಡು ಕಡೆಗಳಿಂದಲೂ ಬರುವ ಮೋಡಗಳು ಘರ್ಷಣೆಯಾದಾಗ ಗುಡುಗು ಉಂಟಾಗುತ್ತದೆ. ಮಳೆಗಾಲದ ಈ ಅವಧಿಯಲ್ಲಂತೂ ಗುಡುಗು ಬರುವುದೇ ಇಲ್ಲ. ಒಳನಾಡು ಭಾಗದಲ್ಲಿ ಭಾರಿ ಮಳೆ ಎಂದರೆ ಮುಂಗಾರು ದುರ್ಬಲವಾಗಿದೆ ಎಂದೇ ಅರ್ಥ ಎನ್ನುತ್ತಾರೆ ಹವಾಮಾನ ವಿಶ್ಲೇಷಕರು.
ಪ್ರಸ್ತುತ ಸುರಿಯುತ್ತಿರುವ ಮಳೆ ಪೂರ್ವ ಮುಂಗಾರು, ಹಿಂಗಾರು ಮಾದರಿಯಲ್ಲಿದೆ. ಗುಡುಗು ಸಹಿತ ಮಳೆಯಾಗುವುದು ಸ್ಥಳೀಯವಾಗಿ ಉಂಟಾಗುವ ಮೋಡಗಳಿಂದ. ಇದು ಹವಾಮಾನ ಮುನ್ಸೂಚನೆಗೆ ಸಿಗುವುದು ಕಷ್ಟ. ಇದಕ್ಕೆಲ್ಲ ನಾವೇ ಕಾರಣ. ಮಾನವ ತನ್ನ ಗುಣ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಬದಲಾಯಿಸಿದ ಹಾಗೆ ಪ್ರಕೃತಿಯೂ ನಡವಳಿಕೆ ಬದಲಾಯಿಸುತ್ತದೆ. ಸಾಯಿಶೇಖರ್ ಕರಿಕಳ, ಹವಾಮಾನ ವಿಶ್ಲೇಷಕ