

ಮಡಿಕೇರಿ:
ಆಗಾಗ್ಗೆ ಅಲ್ಲಲ್ಲಿ ತಂಪೆರೆಯುತ್ತಿರುವ ಬೇಸಿಗೆ ಮಳೆಯ ಮಧ್ಯೆಯೇ ಕೊಡಗಿನಲ್ಲಿ ಬಿಸಿಲಿನ ತಾಪ ನೆತ್ತಿ ಸುಡುತ್ತಿದೆ. ಫೆಬ್ರವರಿ ಮಧ್ಯಭಾಗದಿಂದಲೇ ಈ ಅನುಭವ ಆಗುತ್ತಿದ್ದರೂ ಮಾರ್ಚ್ ಕೊನೆಯಲ್ಲಿ ಸುರಿದ ಮಳೆ ಒಂದಿಷ್ಟು ಸಮಾಧಾನ ತಂದಿತ್ತು. ಈ ವರ್ಷ ಹೀಗೆ ಅತೀ ಬಿಸಿಲು ಇರುವಂತೆ ಮಳೆಗಾಲದಲ್ಲಿ ಮಳೆಯೂ ಹೆಚ್ಚು ಇರಲಿದೆ ಎನ್ನುವ ಹವಾಮಾನ ತಜ್ಞರ ಭವಿಷ್ಯವಾಣಿ ರೈತರಲ್ಲಿ ಖುಷಿಯ ಜತೆಗೆ ಆತಂಕವನ್ನೂ ಹುಟ್ಟಿಸಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಂಗಳವಾರದ ಮಾಹಿತಿ ಪ್ರಕಾರ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಮತ್ತು 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮಾರ್ಚ್ ಅಂತ್ಯಕ್ಕೆ ಅಲ್ಲಲ್ಲಿ ಬಿದ್ದ ಮಳೆಯ ಕಾರಣ ತಾಪಮಾನ ಕಡಿಮೆ ತೋರಿಸುತ್ತಿದ್ದರೂ ಹೆಚ್ಚು ತಾಪ ಇರುವಂತೆ ಸೆಖೆಯ ಅನುಭವ ಆಗುತ್ತಿದೆ. ಕೊಡಗಿನ ಬಹುತೇಕ ಭಾಗಗಲ್ಲಿ ಹೆಚ್ಚು-ಕಡಿಮೆ ಇದೇ ಮಾದರಿಯ ಉಷ್ಣಾಂಶ ಕಂಡು ಬರುತ್ತಿದೆ. ಆದರೆ ಹಾಸನ ಮತ್ತು ಮೈಸೂರು ಗಡಿಭಾಗದ ಪ್ರದೇಶಗಳಲ್ಲಿ ತಾಪಮಾನ ಸುಮಾರು 31 ಡಿಗ್ರಿ ಸೆಲ್ಸಿಯಸ್‌ನ ಗಡಿ ದಾಟಿದೆ.
ಹೆಚ್ಚಲಿದೆ ಬಿಸಿಲು
ಸಾಮಾನ್ಯವಾಗಿ ಮಾರ್ಚ್ ಮಧ್ಯಭಾಗ, ಏಪ್ರಿಲ್ ಮೊದಲ ವಾರದಲ್ಲಿ ಶುರುವಾಗುತ್ತಿದ್ದ ಬೇಸಿಗೆಯ ಅನುಭವ ಈ ವರ್ಷ ಫೆಬ್ರವರಿ ತಿಂಗಳ ಮಧ್ಯಭಾಗದಲ್ಲೇ ಆಗಿದೆ. ವಾಡಿಕೆಗಿಂತ ಶೇ.2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ಫೆಬ್ರವರಿಯಿಂದಲೇ ದಾಖಲಾಗುತ್ತಾ ಬಂದಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಜಾಸ್ತಿ ಬಿಸಿಲು ಇರುತ್ತದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಭೂಮಿಯನ್ನು ಸಹಜವಾಗಿ ತಣ್ಣಗಿಡುವ ಲಾ ನೀನಾ ಪರಿಣಾಮ ಇದ್ದರು ಕೂಡ ಜನವರಿಯಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಇದೇ ಕಾರಣಕ್ಕೆ ಇದುವರೆಗಿನ ಹಾಟೆಸ್ಟ್ ಜನವರಿ ಎಂದು ಜಾಗತಿಕ ಮಟ್ಟದಲ್ಲಿ ಇದು ದಾಖಲಾಗಿದೆ. ನಂತರ ಇದೇ ಹಾದಿಯಲ್ಲಿ ಫೆಬ್ರವರಿ ಕೂಡ ಇತ್ತು. ಮಾರ್ಚ್ನಲ್ಲೂ ಅಂಥ ಏನೂ ವ್ಯತ್ಯಾಸ ಆಗಿರಲಿಲ್ಲ. ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲೂ ಬಿಸಿಲು ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.
ಬೇಸಿಗೆ ಮಳೆ ಬರುತ್ತದೆ
ಕಳೆದ ವರ್ಷವನ್ನೇ ಅತ್ಯಂತ ತಾಪಮಾನ ಹೆಚ್ಚಳವಾದ ವರ್ಷ ಎಂದು ಕರೆಯಲಾಗಿತ್ತು. ಈ ವರ್ಷ ಅದಕ್ಕಿಂತಲೂ ಜಾಸ್ತಿ ಇರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಆದರೆ ಕಳೆದ ಬಾರಿಗಿಂತಲೂ ಈ ವರ್ಷ ಅಧಿಕ ಮಳೆ ಬರುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೂ ಇರುವುದರಿಂದ ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ಬಿಸಿಲು ಹೆಚ್ಚಿದ್ದಷ್ಟೂ ಮಳೆ ಕೂಡ ಭಾರಿ ಪ್ರಮಾಣದಲ್ಲಿ ಸುರಿಯಲಿದೆ ಎನ್ನಲಾಗುತ್ತಿದೆ. ಇನ್ನೂ ಒಂದು ಸಮಾಧಾನದ ವಿಷಯ ಎಂದರೆ ಬೇಸಿಗೆ ತುತ್ತತುದಿಗೆ ಮುಟ್ಟುವ ಏಪ್ರಿಲ್ - ಮೇನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ಕೊನೆಯ ವಾರದಲ್ಲಿ ಮಳೆ ಬೀಳುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಕೊಡಲಾಗಿತ್ತು. ಅದರಂತೆ ಮಳೆಯೂ ಆಗಿದೆ.
ಮುಂಗಾರಿನಲ್ಲಿ ಭಾರಿ ಮಳೆ
ಏಪ್ರಿಲ್, ಮೇ ತಿಂಗಳಿನಲ್ಲಿ ತಂಪೆರೆಯುವ ಮಳೆ ಲಾ ನೀನಾ ಎಫೆಕ್ಟ್ನಿಂದಾಗಿ ಈ ಬಾರಿ ಜೂನ್‌ನಲ್ಲಿ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಹಾಗಾಗಿ ಮುಂಗಾರು ಮಳೆ ಕಳೆದ ಬಾರಿಗಿಂತ ಉತ್ತಮವಾಗಿ ಸುರಿಯಲಿದೆ ಎನ್ನುವ ಅಂದಾಜಿದೆ. ಕಳೆದ ವರ್ಷ ನಿರೀಕ್ಷಿಸಿದ್ದಕ್ಕಿಂತ 4 ದಿನಗಳ ಮುಂಚೆಯೇ ಅಂದರೆ ಜೂ. 4ಕ್ಕೆ ಭಾರತಕ್ಕೆ ಮಾನ್ಸೂನ್ ಮಾರುತಗಳ ಪ್ರವೇಶ ಆಗಿತ್ತು. ಈ ವರ್ಷ ಮೇ 31ಕ್ಕೆ ಕೇರಳಕ್ಕೆ ಮುಂಗಾರು ಕಾಲಿಡಲಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರದ ಹೊತ್ತಿಗೆ ಮುಂಗಾರು ಮಾರುತ ಪ್ರವೇಶಿಸಲಿದ್ದು, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ತಜ್ಞರು ಹೊಂದಿದ್ದಾರೆ.
ಈ ವರ್ಷ ಚಳಿಯೂ ಹೆಚ್ಚು
ಈ ವರ್ಷ ಉತ್ತಮ ಮುಂಗಾರು ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಭಾರಿ ಅನುಕೂಲ ಆಗಲಿದೆ. ಇತ್ತೀಚಿನ ಸಿಎಫ್‌ಎಸ್‌ವಿ 2 ಫಾರ್‌ಕಾಸ್ಟ್ ಪ್ರಕಾರ ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಭಾರತದಲ್ಲಿ ಸುರಿಯಲಿದೆ ಎಂದು ಅಂದಾಜಿಸಿದೆ. ಅದೇ ರೀತಿ ಹಲವು ಅಂಶಗಳು ಈ ಸಲ ಭಾರತದಲ್ಲಿ ಉತ್ತಮ ಮಾನ್ಸೂನ್‌ಗೆ ಬೆಂಬಲಿಸುತ್ತವೆ ಎಂದು ಹೇಳಲಾಗುತ್ತಿದೆ. ಆದರೆ, ಹಿಂಗಾರಿನಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಲಿದೆ ಎಂದು ಊಹಿಸಲಾಗಿದೆ. ಹಿಂಗಾರು ಮಳೆ ಕಡಿಮೆಯಾಗುವ ಕಾರಣ ಹಿಂಗಾರು ಕೃಷಿ ಮಾಡುವ ರೈತರಿಗೆ ಸಮಸ್ಯೆ ಆಗಲಿದೆ. ಇದರ ಜತೆಗೆ ಈ ವರ್ಷ ಚಳಿ ಕೂಡ ಹೆಚ್ಚಿರಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದಾರೆ. ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮೈಕೊರೆವ ಚಳಿಯ ನಿರೀಕ್ಷೆ ಇದೆ.
ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹ
ಮುಂಗಾರು ಅವಧಿ ಆಶಾದಾಯಕ ಆಗಿರುವ ಕಾರಣ ರಾಜ್ಯದ ಜಲಾಶಯಗಳು ಭರ್ತಿ ಆಗುವ ಬಗ್ಗೆ ಆಶಾಭಾವನೆ ಹೊಂದಲಾಗಿದೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸುಮಾರು 500 ಟಿಎಂಸಿಗಳಷ್ಟು ನೀರಿನ ಸಂಗ್ರಹ ಇದೆ. ಕಳೆದ ವರ್ಷ ಈ ಪ್ರಮಾಣ ಸುಮಾರು 300 ಟಿಎಂಸಿಗಳಷ್ಟಿತ್ತು. ಹೀಗೆ ವರ್ಷ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಉಳಿದುಕೊಂಡಿರುವುದು ಮತ್ತು ಉತ್ತಮ ಮುಂಗಾರಿನ ಸೂಚನೆ ಇರುವ ಕಾರಣಕ್ಕೆ ಈ ವರ್ಷ ರಾಜ್ಯದ ಡ್ಯಾಂಗಳು ಕೂಡ ಬೇಗ ಭರ್ತಿ ಆಗಲಿದೆ. ಹಾಗಾಗಿ ಮುಂಗಾರು ಕೃಷಿ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೊಡಗಿನ ಹಾರಂಗಿಯಲ್ಲಿ ಮಂಗಳವಾರದ ಮಾಹಿತಿ ಪ್ರಕಾರ 2.799 ಟಿಎಂಸಿಯಷ್ಟು ಬಳಕೆಗೆ ಸಾಧ್ಯವಾಗುವ ನೀರಿದೆ. ಕಳೆದ ವರ್ಷ ಈ ಪ್ರಮಾಣ 2.454 ಟಿಎಂಸಿ ಇತ್ತು. 2859 ಅಡಿ ಎತ್ತರದ ಅಣೆಕಟ್ಟಯಲ್ಲಿ ಸದ್ಯ 2834.07 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2827.38 ಅಡಿ ನೀರು ಇತ್ತು.
ಲಾ ನೀನಾ ಎಫೆಕ್ಟ್ನಿಂದಾಗಿ ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಕಳೆದ ವರ್ಷಕ್ಕಿಂತ ಉತ್ತಮವಾಗಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ನಿರೀಕ್ಷಿಸಿದ್ದಕ್ಕಿಂತ 4 ದಿನ ಮೊದಲೇ ಅಂದರೆ ಜೂ.4ಕ್ಕೆ ಭಾರತಕ್ಕೆ ಮಾನ್ಸೂನ್ ಮಾರುತ ಪ್ರವೇಶಿಸಿತ್ತು. ಈ ವರ್ಷ ಮೇ 31ಕ್ಕೆ ಕೇರಳಕ್ಕೆ ಮುಂಗಾರು ಕಾಲಿಡಬಹುದು ಎಂದು ನಿರೀಕ್ಷಿಸಲಾಗಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರದ ವೇಳೆಗೆ ಮುಂಗಾರು ಮಾರುತ ಪ್ರವೇಶವಾಗಲಿದ್ದು, ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ತಜ್ಞರು ಹೊಂದಿದ್ದಾರೆ.
ಡಾ. ಜಿ.ವಿ. ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು