ಮನರೇಗಾ ಕೂಲಿ ಹಣ ಸದಸ್ಯರ ಖಾತೆಗೆ!

147
Published on

ತುಮಕೂರು: ಗುಬ್ಬಿ ತಾಲೂಕು ಹಾಗಲವಾಡಿ ಗ್ರಾಪಂನಲ್ಲಿ ಮನರೇಗಾ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಕರ್ನಾಟಕ ಗ್ರಾಮ್​ ಸ್ವರಾಜ್​ ಪಂಚಾಯತ್​ರಾಜ್​ ಅಧಿನಿಯಮ&1993ರ ಪ್ರಕರಣ 43ಎ ಉಪಪ್ರಕರಣ 43&ಎ(1)(5)ರಂತೆ ಗ್ರಾಪಂ ಸದಸ್ಯನಾಗಿ ಆಯ್ಕೆಯಾದವರು ತನ್ನ ಅಧಿಕಾರವಧಿಯಲ್ಲಿ ತಾನು ಸೇರಿದಂತೆ ತನ್ನ ಕುಟುಂಬದ ಹತ್ತಿರದ ಬಂಧುಗಳು ಪಂಚಾಯತ್​ರಾಜ್​ ವ್ಯವಸ್ಥೆಯಲ್ಲಿ ಕಾಮಗಾರಿ ನಡೆಸಲು ಅವಕಾಶವಿಲ. ಆದರೂ ಹಾಗಲವಾಡಿ ಗ್ರಾಪಂನಲ್ಲಿ ಕಾನೂನು ಮೀರಿ ಸದಸ್ಯರೇ ಬಿಲ್​ ಪಡೆದಿರುವುದು ದೃಢವಾಗಿದೆ. ಆದರೂ ಯಾವುದೇ ಕ್ರಮಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ.

ಹಾಗಲವಾಡಿ ಗ್ರಾಪಂ ಹಾಲಿ ಅಧ್ಯಕ್ಷ ಹಾಗೂ ಹಿಂದಿನ ಅವಧಿಯಲ್ಲಿ ಸದಸ್ಯರಾಗಿದ್ದ ಎಚ್​.ಬಿ.ರಮೇಶ್​ ಗೌರವಧನದ ಹೊರತಾಗಿ 15ನೇ ಹಣಕಾಸು ಯೋಜನೆ ಹಾಗೂ ಸ್ಥಳಿಯ ಗ್ರಾಪಂ ನಿಧಿಯಿಂದ ಹಣವನ್ನು ಚೆಕ್​ ಮೂಲಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಹಾಗಲವಾಡಿಯ ಎಚ್​.ಬಿ.ಮಹೇಶ್​ ಎಂಬುವವರು ದೂರು ನೀಡಿದ್ದು, ತನಿಖೆಯಲ್ಲಿ ಆರೋಪ ದೃಢವಾಗಿದೆ.

ಎಚ್​.ಬಿ.ರಮೇಶ್​ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಪಂ ಸಿಇಒಗೆ ಕುಂದು&ಕೊರತೆ ನಿವಾರಣಾ ಪ್ರಾಧಿಕಾರ 2024 ಜೂ.26ರಂದು ಆದೇಶಿಸಿದೆಯಾದರೂ ಮೇಲ್ಮನವಿ ಸಲ್ಲಿಸಿರುವುದನ್ನೇ ನೆಪಮಾಡಿಕೊಂಡು ಕ್ರಮಕೈಗೊಳ್ಳಲು ಸಿಇಒ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಗ್ರಾಪಂ ವತಿಯಿಂದ 1 ಕೋಟಿ ರೂ. ಮನರೇಗಾ ಕಾಮಗಾರಿ ನಡೆಸಲಾಗಿದೆ ಎನ್ನಲಾಗಿದ್ದು, ಈ ಕಾಮಗಾರಿಯಲ್ಲಿಯೂ ನಿಯಮಗಳನ್ನು ಗಾಳಿಗೆ ತೂರಿ ಅವ್ಯವಹಾರ ನಡೆದಿದೆ ಎಂದು ಕೆಲವು ಸ್ಥಳಿಯರು ಆರೋಪಿಸಿದ್ದಾರೆ. ಹಾಗಲವಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಮನರೇಗಾ ಕಾಮಗಾರಿಗಳನ್ನು ಸಮಗ್ರ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಲಸ ಮಾಡದೇ ಸದಸ್ಯರ ಖಾತೆಗೆ ಹಣ!?

ಹಾಗಲವಾಡಿ ಗ್ರಾಪಂ ವ್ಯಾಪ್ತಿಯಲ್ಲಿ 2017ರಲ್ಲಿ 15ಕ್ಕೂ ಹೆಚ್ಚು ಜನರ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗಿದೆ. ಹಿಂದಿನ ಅವಧಿಯಲ್ಲಿಯೂ ಗ್ರಾಪಂ ಸದಸ್ಯರಾಗಿ ಹಾಲಿ ಅಧ್ಯಕ್ಷ ಎಚ್​.ಬಿ.ರಮೇಶ್​ ಕಾಮಗಾರಿಗಳ ದುರಸ್ತಿ, ನಿರ್ವಹಣೆ, ಚರಂಡಿ ದುರಸ್ತಿ ಮತ್ತು ನೈರ್ಮಲ್ಯ ಕಾಮಗಾರಿಗಳ ಸಂಬಂಧ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಎಚ್​.ಬಿ.ಮಹೇಶ್​ ದೂರು ನೀಡಿದ್ದು, ವಿಚಾರಣೆ ನಡೆಸಿದ ಪ್ರಾಧಿಕಾರಕ್ಕೂ ತಪು$್ಪ ನಡೆದಿರುವುದು ಮನವರಿಕೆಯಾಗಿ ಆದೇಶಿಸಿದ್ದಾರೆ. ಈ ಬಗ್ಗೆ ಲಿಖಿತವಾಗಿ ಹೇಳಿಕೆ ನೀಡಿರುವ ಎಚ್​.ಬಿ.ರಮೇಶ್​ 2015&20ರ ಅವಧಿಯಲ್ಲಿ ಹಾಗಲವಾಡಿ ಗ್ರಾಪಂನಲ್ಲಿ ಸದಸ್ಯರಾಗಿದ್ದ 17 ಜನರಿಗೆ ಅಂದಿನ ಪಿಡಿಒ ಬಸವಯ್ಯ ಗ್ರಾಪಂ ಸದಸ್ಯರಿಗೆ ಸರ್ಕಾರದಿಂದ ಬರುವ ಗೌರವಧನವನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿ ಚೆಕ್​ ನೀಡಿದ್ದರು ಎಂದು ಹೇಳಿಕೆ ನೀಡಿ ಕೈತೊಳೆದುಕೊಂಡಿದ್ದಾರೆ. ಆದರೆ, ಅಕ್ರಮ ನಡೆದ ಸಂದರ್ಭದಲ್ಲಿ ಪಿಡಿಒ ಆಗಿದ್ದ ಬಸವಯ್ಯ ನೀಡಿರುವ ಲಿಖಿತ ಹೇಳಿಕೆಯಲ್ಲಿ ನಿಯಮಬಾಹಿರವಾಗಿ ಚೆಕ್​ ಪಡೆದರು ಎಂದು ಒಪ್ಪಿಕೊಂಡಿದ್ದಾರೆ.

"ಮನರೇಗಾ ಕಾಮಗಾರಿ ಅಕ್ರಮ ನಡೆದಿದ್ದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು, ಹಾಗಲವಾಡಿ ಗ್ರಾಪಂನಲ್ಲಿಯೂ ಅಕ್ರಮ ನಡೆದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದು&ಕೊರತೆ ನಿವಾರಣಾ ಪ್ರಾಧಿಕಾರ ನೀಡಿರುವ ಆದೇಶದ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು."

> ಜಿ.ಪ್ರಭು, ಸಿಇಒ ಜಿಲ್ಲಾ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net