

ರೋಣ: ಕಳೆದ 30 ವರ್ಷಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿರುವ ಪಟ್ಟಣದ ಶ್ರೀನಗರ ನಿವಾಸಿ ಪಾಂಡುರಂಗ ಮಾನ್ಪಡೆ ಅವರು ಕಲಾಪ್ರಿಯರ ಮನಗೆದಿದ್ದಾರೆ.
ಇವರು ಕೈಯಲ್ಲಿ ಕಲಾತ್ಮಕವಾಗಿ ರೂಪುಗೊಂಡಿರುವ ಚಕ್ಕಡಿ, ಕುಂಟಿ-ಕೂರಿಗೆ, ಎಡೆಕುಂಟೆ, ಈಳಿಗೆ, ಒರಸು, ನೇಗಿಲು, ತೊಟ್ಟಿಲು, ಚಿಕ್ಕಮಕ್ಕಳ ಗಾಡಿ, ಶಹನಾಯ್, ಏಣಿ ಮತ್ತಿತರ ವಸ್ತುಗಳು ಜನರ ಮನ ಗೆದ್ದಿವೆ.
ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯವಾಗಲಿ ಎಂಬ ಆಶಯದಿಂದ ಕಟ್ಟಿಗೆಯಲ್ಲಿ ವಸ್ತುಗಳನ್ನು ತಯಾರಿಸಲಾಗುತ್ತಿದೆ ಎನ್ನುತ್ತಾರೆ ಮಾನ್ಪಡೆ. ಇವರು ಸಣ್ಣ ಸಣ್ಣ ಕೃಷಿ ಉಪಕರಣಗಳನ್ನು ತಯಾರಿಸುವಲ್ಲಿ ನೈಪುಣ್ಯ ಗಳಿಸಿದ್ದಾರೆ.
ಇವರು ತಯಾರಿಸಿದ ವಸ್ತುಗಳನ್ನು ಜನರು ಖರೀದಿಸಿ ಸ್ನೇಹಿತರು- ಹಿತೈಷಿಗಳಿಗೆ ಉಡುಗೊರೆಯಾಗಿ ನೀಡುತ್ತಾರೆ. ಮೂಲತಃ ಬಾರ್‌ಬೆಂಡಿಂಗ್ ಕೆಲಸ ಮಾಡುತ್ತಿದ್ದ ಪಾಂಡುರಂಗ ಮಾನ್ಪಡೆ ಅವರು ಹವ್ಯಾಸವಾಗಿ ಈ ವೃತ್ತಿಯನ್ನು ಮಾಡಿಕೊಂಡು ಬಂದಿದ್ದಾರೆ.
ಒಂದು ಚಕ್ಕಡಿಯನ್ನು ತಯಾರಿಸಲು ಏಳು ಸಾವಿರ ರೂ. ವೆಚ್ಚ ತಗಲುತ್ತದೆ. ಮತ್ತು ಅದನ್ನು ತಯಾರಿಸಲು ಸುಮಾರು ಹದಿನೈದು ದಿನಗಳು ಬೇಕು ಎನ್ನುತ್ತಾರೆ ಅವರು.
‘ಪ್ರಸಕ್ತ ಸಂದರ್ಭದಲ್ಲಿ ಕರ ಕುಶಲಕರ್ಮಿಗಳ ಕೆಲಸಕ್ಕೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ನಾವು ತಯಾರಿಸುವ ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆಯೂ ಇಲ್ಲ. ಇದರಿಂದಾಗಿ ಅನೇಕ ಕಲೆಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ವಿವಿಧ ಕಲೆಯಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳ ಬದುಕು ಕಷ್ಟದಲ್ಲಿದೆ. ಇಂತಹ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಧನ ನೀಡಿ ನೆರವಿಗೆ ನಿಲ್ಲಬೇಕು’ ಎಂಬ ಆಶಯ ಮಾನ್ಪಡೆ ಅವರದು.