

ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ದೇವರಾಜೇಗೌಡ ಅವರ ಪುತ್ರನಾಗಿರುವ ಮನೋರಂಜನ್ ತಂದೆಯ ಹೆಸರು ಹೇಳಿ ದೆಹಲಿಯಲ್ಲಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದುಕೊಂಡಿದ್ದ. ಮೈಸೂರು ನಿವಾಸಿಯಾದ ಹಿನ್ನೆಲೆಯಲ್ಲಿ ಆತನಿಗೆ ಸುಲಭವಾಗಿ ಸಂದರ್ಶಕರ ಪಾಸ್ ದೊರೆಯಿತು.
ಮನೋರಂಜನ್ ಮಂಗಳವಾರ ದೆಹಲಿಯ ಸಂಸದರ ಕಚೇರಿಗೆ ಭೇಟಿ ನೀಡಿದ್ದ. ಮನೋರಂಜನ್ ಜತೆಗೆ ಮತ್ತೊಬ್ಬ ಆರೋಪಿ ಸಾಗರ್ ಶರ್ಮ ಕೂಡ ಇದ್ದ. ಸಾಗರ್ ಶರ್ಮ ನನ್ನ ಸಹೋದ್ಯೋಗಿ ಎಂದು ಮನೋರಂಜನ್ ಸಂಸದರ ಕಚೇರಿ ಸಿಬ್ಬಂದಿಗೆ ಪರಿಚಯ ಮಾಡಿಕೊಟ್ಟಿದ್ದ. ಆ ನಂತರ ಸಾಗರ್ ಶರ್ಮ ಹೆಸರಿನಲ್ಲಿ ಪಾಸ್ ನೀಡುವಂತೆ ಮನೋರಂಜನ್ ಸಂಸದರ ಕಚೇರಿ ಸಿಬ್ಬಂದಿ ಬಳಿ ಕೇಳಿಕೊಂಡಿದ್ದ.
‘ಈ ಪಾಸ್‌ಅನ್ನು ಸಂಗ್ರಹವಸ್ತುವಾಗಿ ಇಟ್ಟುಕೊಳ್ಳಲು ಸಾಗರ್ ಶರ್ಮ ಬಯಸಿರುವ ಹಿನ್ನೆಲೆಯಲ್ಲಿ ಆತನ ಹೆಸರಿನಲ್ಲಿ ಪಾಸ್ ನೀಡುವಂತೆ’ ಮನೋರಂಜನ್ ಮನವಿ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಂಸದರ ಕಚೇರಿ ಸಿಬ್ಬಂದಿ ಸಾಗರ್ ಶರ್ಮ ಹೆಸರಿನಲ್ಲಿ ಪಾಸ್ ನೀಡಿದ್ದರು. ಒಂದು ಪಾಸ್‌ನಲ್ಲಿ ಇಬ್ಬರಿಗೆ ತೆರಳಲು ಅವಕಾಶವಿದ್ದು, ಸಾಗರ್ ಶರ್ಮನೊಂದಿಗೆ ಮನೋರಂಜನ್ ಸಂಸತ್‌ಗೆ ತೆರಳಿದ್ದ.