

ಮೈಸೂರು: ಸಂಸತ್ ಭವನದಲ್ಲಿ ಬುಧವಾರ ಏಕಾಏಕಿ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದು, ಕೋಲಾಹಲ ಎಬ್ಬಿಸಿ ಆತಂಕ ಸೃಷ್ಟಿಸಿರುವ ವ್ಯಕ್ತಿಗಳ ಪೈಕಿ 33 ವರ್ಷದ ಮನೋರಂಜನ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದವನಾಗಿದ್ದು, ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ವಾಸವಿದ್ದ.
ಈತ ಮಲ್ಲಾಪುರ ಗ್ರಾಮದ ದೇವರಾಜ್‌ಗೌಡ-ಶೈಲಜಾ ದಂಪತಿಯ ಪುತ್ರ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ವಲಸೆ ಬಂದಿದ್ದ ದಂಪತಿಗೆ ವಾಜಮಂಗಲದಲ್ಲಿ 2 ಎಕರೆ ಜಮೀನು, ವಿಜಯನಗರ 2ನೇ ಹಂತದಲ್ಲಿ ಸ್ವಂತ ಮನೆಯಿದೆ. ಜತೆಗೆ, ಹುಟ್ಟೂರಿನಲ್ಲಿಯೂ ಜಮೀನಿದೆ. ಅಲ್ಲದೆ, ಕೊಡಗಿನಲ್ಲಿ ಹೋಂಸ್ಟೇ, ಕೆ.ಆರ್.ಪೇಟೆಯಲ್ಲೂ ಆಸ್ತಿ ಇದೆ. ದೇವರಾಜ್‌ಗೌಡ ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲೂ ಸೇವೆ ಸಲ್ಲಿಸುತ್ತಿದ್ದರು. ಆದರೆ ಆ ಸಂಸ್ಥೆ ಸ್ಥಗಿತಗೊಂಡ ಬಳಿಕ ಕೃಷಿ ಜತೆಗೆ, ರಿಯಲ್ ಎಸ್ಟೇಟ್ ವ್ಯವಹಾರ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ.
ಮೈಸೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢಶಾಲೆ ಓದಿದ್ದ ಮನೋರಂಜನ್, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ ಮಗಿಸಿದ್ದ. ಬಳಿಕ ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ. 2016ರಲ್ಲಿ ಯುಎನ್‌ಎ ಮತ್ತು ಕಾಂಬೋಡಿಯಾಗೆ ಹೋಗಿಬಂದಿದ್ದ. ದೇವರಾಜಗೌಡ ಅವರಿಗೆ ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿ ಇದ್ದು, ಮನೋರಂಜನ್ ಹಿರಿಯ ಮಗನಾಗಿದ್ದಾನೆ.
ಬಿಇ ಪದವಿ ಪಡೆದ ಬಳಿಕ ಯಾವುದೇ ಉದ್ಯೋಗಕ್ಕೆ ಹೋಗದೆ ತಂದೆಯ ಹುಟ್ಟೂರಾದ ಮಲ್ಲಾಪುರ ಗ್ರಾಮದಲ್ಲಿ ಕೃಷಿ ಭೂಮಿ ಜತೆಗೆ ಕೋಳಿ, ಮೀನು ಸಾಕಣೆ ನೋಡಿಕೊಂಡು ಬೆಂಗಳೂರು, ದೆಹಲಿ, ವಿದೇಶ ಸುತ್ತಾಡಿಕೊಂಡಿದ್ದ ಎನ್ನಲಾಗಿದೆ.