

ಮೈಸೂರು:ಮನೋರಂಜನ್ ಕರಾಟೆ ಸೇರಿದಂತೆ ಜೀತ್ ಕುನೆ ದೋ ಕಲಿತಿದ್ದ. ಹಾಗಾಗಿ, ವಿಜಯನಗರ ಬಡಾವಣೆಯ ನಾಲ್ಕು ಮಕ್ಕಳಿಗೆ ತಾನು ಮೈಸೂರಿನಲ್ಲಿ ಇದ್ದಾಗೆಲ್ಲ ಸಂಜೆ 5 ರಿಂದ 8 ಗಂಟೆವರೆಗೆ ತನ್ನ ಮನೆಯ ತಾರಸಿಯಲ್ಲಿ ‘ಜೀತ್ ಕುನೆ ದೋ’ ಎಂಬ ಸಮರಕಲೆ ಹೇಳಿಕೊಡುತ್ತಿದ್ದ.
ಮನೋರಂಜನ್ ವಿಜಯನಗರ ಬಡಾವಣೆಯಲ್ಲಿ ಯಾರನ್ನೂ ಮಾತನಾಡಿಸುತ್ತಿರಲಿಲ್ಲ. ಹಾಗಾಗಿ, ಆತನ ಬಗ್ಗೆ ನೆರೆಹೊರೆಯರಿಗೆ ಹೆಚ್ಚು ಮಾಹಿತಿ ಇಲ್ಲದಿರುವುದು ಕಂಡುಬಂದಿದೆ. ಆತ ಮೈಸೂರಿನ ಮನೆಯಿಂದ ಹೋಗುವ ಮತ್ತು ಬರುವ ಮಾಹಿತಿ ಯಾರಿಗೂ ಇಲ್ಲ. ಕೆಲವು ವರ್ಷಗಳಿಂದ ಪಾಲಿಕೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಈತ ಬಂದಿರಲಿಲ್ಲ. ಜತೆಗೆ, ತನಗೆ ಬರುವ ಎಲ್ಲ ಅಂಚೆ, ಕೊರಿಯರ್‌ಗಳನ್ನು ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿರುವ ಮನೆಯ ವಿಳಾಸಕ್ಕೆ ಬದಲಿಸಿಕೊಂಡಿದ್ದ ಎನ್ನಲಾಗಿದೆ.