

ಬೆಂಗಳೂರು: ಬೆಂಗಳೂರಿನ ನಾಗರಿಕರ ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳು, ಉದ್ಯೋಗ ಸಂಬಂಧಿತ ಒತ್ತಡ ಮತ್ತು ಉದ್ಯಮಶೀಲತೆಯಲ್ಲಾಗುವ ಮಾನಸಿಕ ಪರಿಣಾಮಗಳನ್ನು ಎದುರಿಸಲು ಪರಿಹಾರ ಒದಗಿಸುವ ವೇದಿಕೆ - ‘ಮನೋಬಿಂಬ’ ಸಂವಾದಾತ್ಮಕ ಯೂಟ್ಯೂಬ್ ಚಾನಲ್ ಅನ್ನು ಬಿಬಿಎಂಪಿ ಪರಿಚಯಿಸಿದೆ.
ಇದೇ ಮೊದಲ ಬಾರಿಗೆ ಪಾಲಿಕೆಯು ನಗರವಾಸಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ಮುತುವರ್ಜಿ ವಹಿಸಿದೆ. ಈ ವಿನೂತನ ಮನೋ ಚೈತ್ಯನ್ಯ ಕಾರ್ಯಕ್ರಮವು ತಿಂಗಳಲ್ಲಿ ಎರಡು ದಿನ 45 ನಿಮಿಷಗಳ ಕಾಲ ತಜ್ಞರು ನೀಡುವ ಪರಿಹಾರಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತಹ ಈ ಯೂಟ್ಯೂಬ್ ಚಾನಲ್‌ಗೆ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಗುರುವಾರ ಲೋಕಾರ್ಪಣೆ ಮಾಡಿದರು.
ಸಾರ್ವಜನಿಕರು ಮಾನಸಿಕ ಆರೋಗ್ಯ ತಜ್ಞರೊಂದಿಗೆ ತಮ್ಮ ಮಾನಸಿಕ ಆರೋಗ್ಯ, ಕೆಲಸದ ಸ್ಥಳಗಳಲ್ಲಿ ಒತ್ತಡ ನಿವಾರಣೆ, ಶಾಲಾ-ಕಾಲೇಜಗಳಲ್ಲಿ ಮಕ್ಕಳು ಪರೀಕ್ಷೆ ಒತ್ತಡ ನಿವಾರಣೆ ಹಾಗೂ ಇತರ ಆರೋಗ್ಯ ಕ್ಷೇಮ ವಿಚಾರಗಳ ಬಗ್ಗೆ ಯೂಟ್ಯೂಬ್ ವಿಳಾಸಕ್ಕೆ ಪ್ರಶ್ನೆಗಳ ಮೂಲಕ ಮಾಹಿತಿ ನೀಡಬಹುದಾಗಿದೆ. ಬಳಿಕ ಇದಕ್ಕೆ ತಜ್ಞರು ವಿಶ್ಲೇಷಣೆ ನಡೆಸಿದ ಬಳಿಕ ನಂತರದಲ್ಲಿ ಪ್ರಸಾರವಾಗುವ ಸಂವಾದ ಕಾರ್ಯಕ್ರಮದಲ್ಲಿ ಬಿತ್ತರಿಸಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 280ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ಪಾಲಿಕೆಯ ಶಾಲಾ ವಿದ್ಯಾರ್ಥಿಗಳು ನೇರ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವಿಶೇಷ ಆಯುಕ್ತರೊಂದಿಗೆ ಸಮಾಲೋಚಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
ಮಹಾನಗರದಲ್ಲಿ ಮಾನಸಿಕ ಒತ್ತಡ ಸಮಸ್ಯೆಗಳು ಹೆಚ್ಚುತ್ತಿದ್ದು, ಇವುಗಳ ಪರಿಹಾರಕ್ಕಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನಾಧರಿಸಿ ಪಾಲಿಕೆಯು ತನ್ನ ಸೀಮಿತ ಅವಕಾಶದಲ್ಲಿ ಯೂಟ್ಯೂಬ್ ಚಾನಲ್ ಮೂಲಕ ವೈದ್ಯರು ಹಾಗೂ ತಜ್ಞರ ನೆರವು ಪಡೆದು ಸಮಸ್ಯೆಗಳಿಗೆ ಸಂವಾದಲ್ಲಿ ಪರಿಹಾರ ಒದಗಿಸಲಾಗುವುದು. ಅಕ್ಟೋಬರ್‌ವರೆಗಿನ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು.
- ಸುರೋಳ್ಕರ್ ವಿಕಾಸ್ ಕಿಶೋರ್, ಪಾಲಿಕೆ ವಿಶೇಷ ಆಯುಕ್ತ (ಆರೋಗ್ಯ ವಿಭಾಗ)