

ಹುಬ್ಬಳ್ಳಿ: ಜಗತ್ತಿನಲ್ಲಿಯೇ ವಿಶಿಷ್ಟವಾದ ಭಾರತದ ಸಂಪ್ರದಾಯ, ಹಬ್ಬ ಹರಿದಿನಗಳು ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದ್ದು, ಇದನ್ನು ಅಧ್ಯಯನ ಮಾಡಲು ಅನೇಕ ವಿದೇಶಿಗರು ಬರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿಯ ಕಲ್ಯಾಣನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಇತ್ತೀಚೆಗೆ ಡಾ. ರಾಮು ಮೂಲಗಿ ಅವರ ಕೃತಿ ಮಣ್ಣುಪೂಜೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿದೇಶಿಗರು ನಮ್ಮ ಸಂಪ್ರದಾಯ ಸಂಶೋಧನೆ ಮಾಡಿ ಅದರ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬರುತ್ತಾರೆ. ಆದರೆ, ದೇಶದಲ್ಲಿ ಕೆಲವರು ಅವರ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವ ಮನಸ್ಥಿತಿ ಹೊಂದಿದ್ದಾರೆ ಎಂದರು.
ದೇಶದ ಕುಟುಂಬ ವ್ಯವಸ್ಥೆ ಅತ್ಯಂತ ಪವಿತ್ರವಾಗಿದ್ದು, ಇಲ್ಲಿಯ ಕೃಷಿ ಪರಂಪರೆಯಂತೂ ಹೆಚ್ಚು ಮಹತ್ವ ಪಡೆದಿದೆ. ನಮ್ಮ ಜನಪದರಿಗೆ ಮಣ್ಣು ಅತ್ಯಂತ ಪವಿತ್ರವಾಗಿದೆ. ಮಣ್ಣು ಪೂಜೆ ಎಂದರೆ ಮಾತೃಭೂಮಿಗೆ ಗೌರವ ಸಲ್ಲಿಸಿದಂತೆ. ಎತ್ತು, ಗುಳ್ಳವ್ವ, ನಾಗಪ್ಪ, ಗಣಪತಿ, ಜೋಕುಮಾರ ಮುಂತಾದ ಮಣ್ಣು ಪೂಜೆಯ ಪರಂಪರೆಯನ್ನು ಡಾ. ರಾಮು ಮೂಲಗಿ ಅವರು ಬರೆಹದ ರೂಪದಲ್ಲಿ ಹಿಡಿದಿಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಸಂಗಮನಾಥ ಲೋಕಾಪುರ ಕೃತಿ ಪರಿಚಯಿಸಿದರು. ರಾಮಕೃಷ್ಣ ಆಶ್ರಮದ ಸ್ವಾಮಿತೇಜಸಾನಂದಜೀ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಬಸವರಾಜ ಯಕಲಾಸಪೂರ, ಡಾ. ಶಾಂತಣ್ಣ ಕಡಿವಾಳ, ವಿ.ಜಿ. ಪಾಟೀಲ, ಸಂಬಾಜಿ ಕಲಾಲ, ಡಾ. ಎಚ್.ವಿ. ಬೆಳಗಲಿ, ಜ್ಯೋತಿರ್ಲಿಂಗ ಇತರರು ಉಪಸ್ಥಿತರಿದ್ದರು.
ಗುರುಸಿದ್ದಪ್ಪ ಜಂಗಣ್ಣವರ ಅವರು ಪತ್ನಿ ಅಕ್ಕಮಹಾದೇವಿ ಅವರ ಸ್ಮರಣಾರ್ಥ ದತ್ತಿ ನಿಧಿಯನ್ನು ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟಿನ ಅಧ್ಯಕ್ಷ ಡಾ. ರಾಮ ಮೂಲಗಿ ಅವರಿಗೆ ನೀಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ನದಾಫ ಎಚ್.ಎಚ್. ಕಾರ್ಯಕ್ರಮ ನಿರೂಪಿಸಿದರು. ಸಾಯಿ ಮಹಿಳಾ ಮಂಡಳದವರು ಜಾನಪದ ಹಾಡು ಹೇಳಿದರು. ಡಾ. ನಾಗಲಿಂಗ ಮುರಗಿ ವಂದಿಸಿದರು.