

ಮಂಡ್ಯ: ಜಿಲ್ಲೆಯ ಹಾಲು ಉತ್ಪಾದಕರಿಗೆ 67 ಕೋಟಿ ರೂ. ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದೆ. ಇದರಿಂದಾಗಿ ಹೈನುಗಾರಿಕೆ ನಂಬಿಕೊಂಡಿರುವ ರೈತರಿಗೆ ತೊಂದರೆಯಾಗಿದೆ. ಇನ್ನೊಂದು ತಿಂಗಳಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಎಚ್ಚರಿಕೆ ನೀಡಿದರು.
ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ 5 ರೂ. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ರಾಜ್ಯದಲ್ಲಿ ಸುಮಾರು 600 ಕೋಟಿ ರೂ.ಗಳನ್ನು ನೀಡಬೇಕಾಗಿದೆ. ಹೈನುಗಾರಿಕೆ ಪ್ರೋತ್ಸಾಹಿಸುವ ಸಲುವಾಗಿ ಬಿ.ಎಸ್.ಯಡಿಯೂರಪ್ಪ ಅವರು ಗುಣಮಟ್ಟದ ಹಾಲು ಸರಬರಾಜು ಮಾಡುವ ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ನಂತರ 2023ರ ಅಕ್ಟೋಬರ್ ತಿಂಗಳಿನಿಂದ 2024ರ ಫೆಬ್ರವರಿವರೆಗೆ ಹಣ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ಹಾಲು ಉತ್ಪಾದಕರಿಗೆ ಹಣ ನೀಡದೆ ದೊಡ್ಡ ಪೆಟ್ಟು ನೀಡಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು, ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ 1.10 ಲಕ್ಷ ಉತ್ಪಾದಕರಿದ್ದು, ಈ ಪೈಕಿ ಗುಣಮಟ್ಟದ ಹಾಲು ಪೂರೈಕೆ ಮಾಡುವ 98 ಸಾವಿರ ಜನರಿಗೆ ಇಲ್ಲಿವರೆಗೆ ಪ್ರೋತ್ಸಾಹ ಧನ ನೀಡಿಲ್ಲ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹಣವನ್ನು ಉತ್ಪಾದಕರ ಖಾತೆಗೆ ಹಾಕಿದ್ದೇವೆ ಎನ್ನುತ್ತಾರೆ. ಆದರೆ, ಕೆಲವರಿಗೆ ಮಾತ್ರ ಹಣ ಬಂದಿದ್ದು, ಉಳಿದ ಬಹುತೇಕ ಉತ್ಪಾದಕರಿಗೆ ಹಣ ಬಂದಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಮನ್‌ಮುಲ್‌ನಲ್ಲಿ ಸದ್ಯ 11 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 5.5 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಪೌಡರ್ ಸೇರಿದಂತೆ ಉತ್ಪನ್ನಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರ ಹಾಲು ದರ ಹೆಚ್ಚಳಕ್ಕೆ ಒಕ್ಕೂಟ ಅಥವಾ ಮಹಾಮಂಡಳಕ್ಕೆ ಅವಕಾಶ ಮಾಡಿಕೊಟ್ಟರೆ ಹೆಚ್ಚುವರಿ ದರವನ್ನು ಉತ್ಪಾದಕರಿಗೆ ನೀಡಲು ಅನುಕೂಲವಾಗುತ್ತದೆ. ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದು, ಅದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ದೆಹಲಿಯಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ದೆಹಲಿಯಲ್ಲಿ ಮಾರುಕಟ್ಟೆ ಒದಗಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪರವಾಗಿರುವ ಸಹಕಾರ ಸಂಘಗಳಲ್ಲಿ ಹಾಲಿ ಸರ್ಕಾರದ ಕೈಗೊಂಬೆಯಾಗಿರುವ ಅಧಿಕಾರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಸಹಕಾರ ಸಂಘಗಳ ನಿಬಂಧನೆಗೊಳಪಟ್ಟು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಸಹಕಾರಿ ತತ್ವದಡಿ ಸ್ಥಾಪಿತವಾಗಿರುವ ಸಂಘಗಳನ್ನು ಉಳಿಸಿ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ಮನ್‌ಮುಲ್ ಮಾಜಿ ನಿರ್ದೇಶಕ ನೆಲ್ಲಿಗೆರೆ ಬಾಲಕೃಷ್ಣ ಮಾತನಾಡಿ, ಸಹಕಾರ ಇಲಾಖೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಮುಂದಿಟ್ಟುಕೊಂಡು ಕಲೆಕ್ಷನ್‌ಗಾಗಿ ಸಹಕಾರ ಸಂಘಗಳ ನಿರ್ದೇಶಕರನ್ನು ವಜಾ ಮಾಡುವಂತಹ ಧೋರಣೆ ಅನುಸರಿಸುತ್ತಿದ್ದಾರೆ. ಮುಂದೆ ಇಂತಹ ಕ್ರಮಗಳನ್ನು ಅನುಸರಿಸಿದಲ್ಲಿ ಜಿಲ್ಲಾದ್ಯಂತ ಸಹಕಾರಿಗಳೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನ್‌ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ರೂಪಾ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬೂದನೂರು ಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್ ಇದ್ದರು.