

ಮಂಡ್ಯ: ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಬೆನ್ನಲ್ಲೇ ರೈತರಿಗೆ ನೆರವಾಗುವ ಉದ್ದೇಶದಿಂದ ಉತ್ಪಾದನಾ ವೆಚ್ಚವನ್ನು 1.12 ರೂ ಏರಿಕೆ ಮಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ಆದೇಶ ಹೊರಡಿಸಿದೆ.
ಹಾಲಿನ ಗುಣಮಟ್ಟ ಅಂದರೆ ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶದ ಆಧಾರದಲ್ಲಿ ಸಂಘಕ್ಕೆ ಪ್ರತಿ ಕೆ.ಜಿಗೆ ನೀಡಲಾಗುತ್ತಿದ್ದ 28.03 ರೂಗಳನ್ನು 29.15 ರೂಗೆ ಏರಿಕೆ ಮಾಡಲಾಗಿದೆ. ಅಂತೆಯೇ ರೈತರಿಗೆ ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿದ್ದ 27.13 ರೂಗಳನ್ನು 28.25 ರೂಗೆ ಹೆಚ್ಚಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರತಿನಿತ್ಯ ಸರಾಸರಿ 10 ಲಕ್ಷ ಲೀಟರ್ ಹಾಲನ್ನು ಶೇಖರಿಸಲಾಗುತ್ತಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದರಿಂದ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಶೇಖರಣೆ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ನಡುವೆ ರೈತರಿಗೆ ಹಾಲು ಉತ್ಪಾದನಾ ವೆಚ್ಚ ಕೂಡ ಅಧಿಕವಾಗಿದೆ. ಅಂತೆಯೇ ಒಕ್ಕೂಟದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಮತ್ತು ಉತ್ತಮ ಮಾರಾಟದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ಜು.30ರಂದು ಆಯೋಜಿಸಿದ್ದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಅದರಂತೆ ಹೊಸ ದರ ಆ.11ರಿಂದ ಜಿಲ್ಲಾದ್ಯಂತ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.